ಹೆಸರಾಂತ ಸಾಹಿತಿ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar) ಅವರ ಟೆಂಟ್ ಸ್ಕೂಲ್ ಆಫ್ ಸಿನಿಮಾದಲ್ಲಿ ಕಾರ್ಯಗಾರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮನ್ ಚಂಗಪ್ಪ ನಿರ್ದೇಶಿಸಿರುವ ಮೊದಲ ಕಿರುಚಿತ್ರ ‘ದ್ವಂದ್ವಂ ದ್ವಯಂ’ (Dvandvam Dwayam). ಇತ್ತೀಚಿಗೆ ಈ ಕಿರುಚಿತ್ರದ ಪ್ರದರ್ಶನ ಹಾಗೂ ಸಂವಾದ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನೆರವೇರಿತು. ನಾಗತಿಹಳ್ಳಿ ಚಂದ್ರಶೇಖರ್, ಡಾ.ನಾದ ಶೆಟ್ಟಿ, ಅಶೋಕ್ ಕಶ್ಯಪ್, ಅನೂಪ್ ಭಂಡಾರಿ ಹಾಗೂ ಚಂಪಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಕಿರುಚಿತ್ರವನ್ನು ವೀಕ್ಷಿಸಿ ತಮ್ಮ ಪ್ರೋತ್ಸಾಹಭರಿತ ಮಾತುಗಳೊಂದಿಗೆ ಕಿರುಚಿತ್ರ (Short Film) ತಂಡದವರಿಗೆ ಶುಭ ಕೋರಿದರು.
ಮರಣದಂಡನೆಗೆ ಮುನ್ನ ಜೈಲು ಕೈದಿಯೊಬ್ಬನ ಕೊನೆಯ ರಾತ್ರಿಯ ಕ್ಯಾನ್ವಾಸ್ ನಲ್ಲಿ ತೆರೆದುಕೊಳ್ಳುವ ಚಿತ್ರವಿದು. ಪ್ರತಿಯೊಬ್ಬ ವ್ಯಕ್ತಿಯ ಅಸ್ತಿತ್ವದಲ್ಲಿ ಅಂತರ್ಗತವಾಗಿರುವ ಸಂಕೀರ್ಣವಾಗಿ ಪರಿಶೀಲಿಸುವ ಚಿತ್ರವಿದು. 17 ನಿಮಿಷಗಳ ಅವಧಿಯಲ್ಲಿ ಮಾನವ ಬದುಕಿನ ಸಂಕೀರ್ಣತೆಗಳನ್ನು ಆಳವಾಗಿ ಪರಿಶೋಧಿಸುವ ಪ್ರಯತ್ನವನ್ನು ಈ ಕಿರುಚಿತ್ರ ಮಾಡುತ್ತದೆ. ನಮ್ಮೆಲ್ಲರೊಳಗಿನ ಜೀವನ ಹಾಗೂ ಆಯ್ಕೆಗಳ ಅನ್ವೇಷಣೆಯೇ ಈ ದ್ವಂದ್ವಂ ದ್ವಯಂ ಎಂದು ಕಿರುಚಿತ್ರದ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟ ನಿರ್ದೇಶಕ ಮನ್ ಚಂಗಪ್ಪ, ನನ್ನ ಮೊದಲ ಕಿರುಚಿತ್ರದ ಪ್ರದರ್ಶನ, ನನ್ನ ಇಬ್ಬರು ಗುರುಗಳಾದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ನಾದ ಶೆಟ್ಟಿ ಅವರ ಮುಂದೆ ಆಗಿರುವುದು ಬಹಳ ಖುಷಿಯಾಗಿದೆ. ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಛಾಯಾಗ್ರಾಹಕ ಹಾಗೂ ನಿರ್ದೇಶಕ ಅಶೋಕ್ ಕಶ್ಯಪ್, ನಿರ್ದೇಶಕಿ ಚಂಪಾ ಶೆಟ್ಟಿ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಮತ್ತು ನನ್ನ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು.
ಯಲೋ ಡೈರೀಸ್ ಮೂಲಕ ಹರ್ಷಿಕಾ ವಸಂತ್ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿರುವ ವಿಕಾಶ್ ಉತ್ತಯ್ಯ “ಸೂರ್ಯ” ಎಂಬ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೂರ್ಯ ಹಾಗೂ ಸುಮೋಕ್ಷ ತಾರಾಬಳಗದಲ್ಲಿದ್ದಾರೆ.
ಮನ್ ಚಂಗಪ್ಪ ಅವರೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ನಾದ ಶೆಟ್ಟಿ ಅವರದು. ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ರಾಜಾರಾವ್ ಅಂಚಲ್ಕರ್ ಛಾಯಾಗ್ರಹಣ ಹಾಗೂ ಉದಯ್ ಕುಮಾರ್ ಅವರ ಸಂಕಲನ ದ್ವಂದ್ವಂ ದ್ವಯಂ ಕಿರುಚಿತ್ರಕ್ಕಿದೆ.