ಬೆಂಗಳೂರು: ಹೊಸಾ ಹೀರೋ ಎಂಟ್ರಿ ಕೊಡುತ್ತಿರುವ ಚಿತ್ರವೊಂದು ಈ ಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಲು ಹೇಗೆ ಸಾಧ್ಯ ಅಂತೊಂದು ಅಚ್ಚರಿಗೆ ಕಾರಣವಾಗಿರೋ ಚಿತ್ರ ಪಡ್ಡೆಹುಲಿ. ಹಾಡುಗಳ ಮೂಲಕ ಭರ್ಜರಿಯಾಗೇ ಸೌಂಡ್ ಮಾಡುತ್ತಿರೋ ಈ ಸಿನಿಮಾ ಡಬ್ಬಿಂಗ್ ರೈಟ್ಸ್ ಸೇಲಾದ ಮೊತ್ತ ನೋಡಿದರೆ ಯಾರಾದರೂ ಬೆರಗಾಗದೆ ಬೇರೆ ದಾರಿಗಳಿಲ್ಲ.
ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ 2.36 ಕೋಟಿಗೆ ಮಾರಾಟವಾಗಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಈ ಚಿತ್ರವನ್ನು ಇಷ್ಟು ದೊಡ್ಡ ಮಟ್ಟಕ್ಕೆ ಚೆನ್ನೈ ಮೂಲದ ಸಂಸ್ಥೆಯೊಂದು ಖರೀದಿಸಿದೆ. ಎಸ್ಪಿಎಂ ಆಟ್ರ್ಸ್ ಎಲ್ ಎಲ್ ಬಿ ಎಂಬ ಸಂಸ್ಥೆ ಪಡ್ಡೆಹುಲಿ ಬಿಡುಗಡೆಪೂರ್ವದಲ್ಲಿಯೇ ಸೃಷ್ಟಿಸಿರೋ ಹವಾ ಕಂಡು ಇಂಥಾ ಡಬ್ಬಿಂಗ್ ಹಕ್ಕನ್ನು ಖರೀದಿ ಮಾಡಿದೆ.
ಈ ವಿಚಾರವನ್ನು ಖುದ್ದು ನಿರ್ದೇಶಕ ಗುರು ದೇಶಪಾಂಡೆ ಅವರೇ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳು ಹೀಗೆ ಭಾರೀ ಮೊತ್ತಕ್ಕೆ ಸೇಲ್ ಆಗೋದಿದೆ. ಆದರೆ ಹೊಸಾ ನಟರ ಚಿತ್ರಗಳ ಡಬ್ಬಿಂಗ್ ರೈಟ್ಸ್, ಟಿವಿ ರೈಟ್ಸ್ ಗೂ ಅಲೆದಾಡುವ ವಾತಾವರಣವಿದೆ. ಆದರೆ ಪಡ್ಡೆಹುಲಿ ಚಿತ್ರದ ಡಬ್ಬಿಂಗ್ ರೈಟ್ಸ್ ಸ್ಟಾರ್ ನಟರ ಸಿನಿಮಾಗಳಿಗೆ ಸರಿಸಮನಾದ ಮೊತ್ತಕ್ಕೆ ಮಾರಾಟವಾಗಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸಾ ಹುಡುಗ ನಾಯಕನಾಗಿರೋ ಚಿತ್ರವೊಂದು ಇಂಥಾ ಬ್ಯುಸಿನೆಸ್ ಮಾಡಿರೋದು ಇದೇ ಮೊದಲು. ಇದು ಪಡ್ಡೆಹುಲಿಯ ಗೆಲುವಿನ ಮುನ್ಸೂಚನೆ. ಈ ಸಿನಿಮಾದ ಪ್ರಭೆ ರಾಜ್ಯದ ಗಡಿ ದಾಟಿ ಎಲ್ಲ ಚಿತ್ರರಂಗಗಳಿಗೂ ತಲುಪಿಕೊಂಡಿರೋ ಸೂಚನೆಯೂ ಹೌದು.