ಮಡಿಕೇರಿ: ದುಬೈನಿಂದ ಗುರುವಾರದಂದು ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೆಮ್ಮು, ಶೀತ ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿರುವ ಐಸೋಲೇಟೆಡ್ ವಾರ್ಡ್‍ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ದುಬೈನಿಂದ ಮಂಗಳೂರು ಏರ್‌ಪೋರ್ಟ್‌ಗೆ ಗುರುವಾರ ಬಂದ ಸಂದರ್ಭ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಆದರೆ ಅವರು ಅಲ್ಲಿಂದ ಕೊಡಗಿಗೆ ಬರುವ ಸಂದರ್ಭ ಶೀತ ಮತ್ತು ಕೆಮ್ಮು ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರನ್ನು ಪರಿಶೀಲನೆ ನಡೆಸಿದಾಗ ಅವರಿಗೆ ತೀವ್ರ ಜ್ವರ ಇರುವುದು ಗೊತ್ತಾಗಿದೆ. ಹೀಗಾಗಿ ಅವರನ್ನು ಐಸೋಲೇಟೆಡ್ ವಾರ್ಡ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವ್ಯಕ್ತಿಯ ಗಂಟಲದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಸಂಜೆ ಅಥವಾ ನಾಳೆ ವರದಿ ಬರಲಿದ್ದು ಸ್ಥಿತಿ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಿಯೂ ಸ್ಕ್ರೀನಿಂಗ್ ಮಾಡುತ್ತಿಲ್ಲ. ಹೊರ ದೇಶಗಳಿಂದ ಬರುತ್ತಿರುವವರನ್ನು ಮಂಗಳೂರು ಮತ್ತು ಕೊಡಗಿಗೆ ಹತ್ತಿರದಲೇ ಇರುವ ಕೇರಳದ ಕಣ್ಣೂರು ಏರ್‌ಪೋರ್ಟ್ ನಲ್ಲೂ ಸ್ಕ್ರೀನಿಂಗ್ ಇರುವುದರಿಂದ ನಾವು ಎಲ್ಲಿಯೂ ಸ್ಕ್ರೀನಿಂಗ್ ಮಾಡುತ್ತಿಲ್ಲ. ಏರ್ ಪೋರ್ಟ್ ಅಧಿಕಾರಿಗಳು ಹೊರದೇಶಗಳಿಂದ ಬರುತ್ತಿರುವವರ ಮಾಹಿತಿ ನೀಡುತ್ತಿದ್ದು ಅಂತವರ ಮೇಲೆ ಮಾತ್ರ ನಿಗಾ ಇರಿಸಲಾಗುತ್ತಿದೆ ಎಂದಿದ್ದಾರೆ.