ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಸದಾ ಬಿಸಿಲನ್ನೇ ಕಾಣುತ್ತಿದ್ದ ದುಬೈನಲ್ಲಿ (Dubai Rain) ವರುಣನ ಆರ್ಭಟಿಸಿತು. ಎಲ್ಲೆಲ್ಲೂ ನೀರು.. ನೀರು.. ರಸ್ತೆಗಳಲ್ಲಿ ಚರಂಡಿಗಳಂತೆ ನೀರು ಹರಿದಿದೆ. ವಿಮಾನ ನಿಲ್ದಾಣ ತೊರೆಯಂತಾಗಿದೆ. ತಿಳಿ ನೀಲಿ ಬಣ್ಣದಿಂದ ಕೂಡಿರುತ್ತಿದ್ದ ಆಕಾಶದಲ್ಲಿ ಕಪ್ಪನೆ ಕಾಮೋಡವಾಗಿ, ಬರಬರುತ್ತಾ ಹಸಿರು ಬಣ್ಣಕ್ಕೆ ತಿರುಗಿ ಕೆಲ ದಿನಗಳಿಂದ ಎಡಬಿಡದೆ ಮಳೆ ಸುರಿಯಿತು. ವಿಶ್ವದ ಅತಿ ಎತ್ತರದ ಬುರ್ಜ್ ಖಲೀಫಾ ಚುಂಬಿಸುವಂತೆ ಬರುತ್ತಿದ್ದ ಮಿಂಚು ಭೀತಿ ಹುಟ್ಟಿಸುವಂತಿತ್ತು. ಅಪಾರ ಪ್ರಮಾಣದ ಮಳೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ.
ಶುಷ್ಕ ಅರೇಬಿಯನ್ ಪೆನಿನ್ಸುಲಾ ದೇಶವಾಗಿರುವ ಯುಎಇಯಲ್ಲಿ ಭಾರೀ ಮಳೆಯಾಗುವುದು ತೀರ ಅಸಾಮಾನ್ಯ. ಸಾಮಾನ್ಯವಾಗಿ ತಂಪಾದ ಚಳಿಗಾಲದ ತಿಂಗಳುಗಳಲ್ಲಿ ಸಾಂದರ್ಭಿಕವಾಗಿ ಈ ಪ್ರದೇಶದಲ್ಲಿ ಮಳೆಯಾಗುತ್ತದೆ. ಆದರೆ ಈ ಬಾರಿ 75 ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. 1949 ರಲ್ಲಿ ದಾಖಲೆಯ ಮಳೆಯಾಗಿತ್ತು. ಇದನ್ನೂ ಓದಿ: ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್‌ಲೈನ್ ತಂಡ!
ಮರುಭೂಮಿ ರಾಷ್ಟ್ರದಲ್ಲಿ ಈ ಪ್ರಮಾಣದ ಮಳೆಯೆಂದರೆ ಅಚ್ಚರಿಯಾಗುವುದು ಸಹಜ. ಅಷ್ಟಕ್ಕೂ ದುಬೈನಲ್ಲಿ ಏನಾಗುತ್ತಿದೆ? ಭಾರೀ ಪ್ರಮಾಣದಲ್ಲಿ ಮಳೆಯಾಗಲು ಕಾರಣವೇನು? ಇದು ಮೋಡ ಬಿತ್ತನೆಯಿಂದಾಗಿದ್ದೋ ಅಥವಾ ಹವಾಮಾನ ಬದಲಾವಣೆಯ ಪರಿಣಾಮವೋ? ದುಬೈನ ಪ್ರವಾಹದ ಮಳೆಗೆ ಅಸಲಿ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.
ದುಬೈನಲ್ಲಿ ಏನಾಯಿತು?
ಸೋಮವಾರ (ಏ.15) ರಾತ್ರಿ ಗುಡುಗು ಸಹಿತ ಮಳೆ ಪ್ರಾರಂಭವಾಯಿತು. ಮಂಗಳವಾರ ಸಂಜೆಯ ವೇಳೆಗೆ 142 ಮಿಲಿಮೀಟರ್ (ಮಿಮೀ) ಗಿಂತ ಹೆಚ್ಚಿನ ಮಳೆ ಮರುಭೂಮಿ ನಗರ ದುಬೈನಲ್ಲಿ ಸುರಿದಿದೆ. ಸಾಮಾನ್ಯವಾಗಿ, ನಗರವು ಒಂದೂವರೆ ವರ್ಷದಲ್ಲಿ ಇಷ್ಟು ಮಳೆಗೆ ಸಾಕ್ಷಿಯಾಗಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭಾರೀ ಪ್ರಮಾಣದ ಮಳೆಯಾಗಿದೆ. ಪರಿಣಾಮವಾಗಿ ವಿಮಾನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕೆಲ ದಿನಗಳವರೆಗೂ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು.
ವಾಹನಗಳಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿಗಳು
ದಾಖಲೆಯ ಮಳೆಗೆ ದುಬೈನಾದ್ಯಂತ ಮನೆಗಳು ಜಲಾವೃತಗೊಂಡವು. ವಾಹನ ಸಂಚಾರಕ್ಕೆ ತೊಡಕಾಯಿತು. ದುಬೈ ಮಾಲ್ ಮತ್ತು ಮಾಲ್ ಆಫ್ ದಿ ಎಮಿರೇಟ್ಸ್ನಂತಹ ಜನಪ್ರಿಯ ಖರೀದಿ ಕೇಂದ್ರಗಳು ಜಲಾವೃತಗೊಂಡಿವೆ. ನೀರನ್ನು ತೆರವುಗೊಳಿಸಲು ಟ್ಯಾಂಕರ್ ಲಾರಿಗಳನ್ನು ರಸ್ತೆ ಮತ್ತು ಹೆದ್ದಾರಿಗಳಿಗೆ ಇಳಿಸಲಾಗಿದೆ. ದುಬೈನಿಂದ ಸುಮಾರು 130 ಕಿಮೀ ದೂರದಲ್ಲಿರುವ ಅಲ್ ಐನ್ ನಗರವು 254 ಮಿಮೀ ದಾಖಲೆಯ ಮಳೆಯನ್ನು ಕಂಡಿದೆ. ಯುಎಇಯ ಪೂರ್ವ ಕರಾವಳಿಯಲ್ಲಿರುವ ಫುಜೈರಾದಲ್ಲಿ ಮಂಗಳವಾರ 145 ಮಿಮೀ ಮಳೆಯಾಗಿದೆ. ಪರಿಣಾಮವಾಗಿ ಯುಎಇಯಾದ್ಯಂತ ಕೆಲ ದಿನ ಶಾಲೆಗಳನ್ನು ಮುಚ್ಚಲಾಯಿತು. ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿತು. ಯುಎಇ ನೆರೆಯ ಒಮಾನ್‌ನಲ್ಲಿಯೂ ತೀವ್ರವಾದ ಮಳೆ ಬಿದ್ದಿತು. ಮಳೆ ಹೊಡೆತಕ್ಕೆ 18 ಮಂದಿ ಬಲಿಯಾದರು. ಅವರ ಪೈಕಿ 10 ಶಾಲಾ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ವಾಹನಗಳಲ್ಲೇ ಕೊಚ್ಚಿ ಹೋದರು. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ
ದುಬೈನಲ್ಲಿ ಭಾರೀ ಮಳೆಗೆ ಕಾರಣವೇನು?
ಮಳೆಗೆ ಚಂಡಮಾರುತ ಕಾರಣ ಎಂದು ತಜ್ಞರು ಹೇಳಿದ್ದಾರೆ. ಚಂಡಮಾರುತವು ಅರೇಬಿಯನ್ ಪರ್ಯಾಯ ದ್ವೀಪದ ಮೂಲಕ ಹಾದುಹೋಗುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಆದರೆ ಹವಾಮಾನ ವಿಜ್ಞಾನ ಕಾಲಿನ್ ಮೆಕಾರ್ಥಿ, ಭಾರೀ ಮಳೆಗೆ ಪರ್ಷಿಯನ್ ಕೊಲ್ಲಿಯ ಬೆಚ್ಚಗಿನ ನೀರಿನಿಂದ ರೂಪುಗೊಂಡ ಅನೇಕ ಸುತ್ತಿನ ತೀವ್ರವಾದ ಗುಡುಗುಗಳು ಕಾರಣವೆಂದು ಹೇಳಿದ್ದಾರೆ. ಹವಾಮಾನ ಬದಲಾವಣೆ ಮಳೆಗೆ ಕಾರಣವಾಗಿದೆ ಎಂದು ಮತ್ತೊಬ್ಬ ತಜ್ಞ ಫ್ರೆಡೆರಿಕ್ ಒಟ್ಟೊ ವಿಶ್ಲೇಷಿಸಿದ್ದಾರೆ. ಇನ್ನೂ ಕೆಲವರು ಮೋಡ ಬಿತ್ತನೆಯು ದುಬೈನಲ್ಲಿ ಭಾರೀ ಮಳೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಮೋಡ ಬಿತ್ತನೆ ಎಂದರೇನು?
ಯುಎಇ 2000 ರ ದಶಕದಲ್ಲಿ ನೀರಿನ ಅಭಾವದ ಸಮಸ್ಯೆ ಪರಿಹರಿಸಲು ಮೋಡ ಬಿತ್ತನೆ ಕಾರ್ಯಾಚರಣೆ ಆರಂಭಿಸಿತು. ಈ ಬಾರಿ ಮಳೆಗಾಗಿ ಅಲ್ ಐನ್ ವಿಮಾನ ನಿಲ್ದಾಣದಿಂದ ವಿಮಾನಗಳ ಮೂಲಕ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹವಾಮಾನಶಾಸ್ತ್ರಜ್ಞ ಅಹ್ಮದ್ ಹಬೀಬ್ ತಿಳಿಸಿದ್ದಾರೆ.
ಮೋಡ ಬಿತ್ತನೆಯು ಒಂದು ರೀತಿಯ ಹವಾಮಾನ ಮಾರ್ಪಾಡು ಪ್ರಕ್ರಿಯೆಯಾಗಿದೆ. ಅದು ಮಳೆ ಅಥವಾ ಹಿಮವನ್ನು ಹೆಚ್ಚಿಸುತ್ತದೆ. ಮೋಡದ ಹನಿಗಳು ಸ್ವಯಂಪ್ರೇರಿತವಾಗಿ ರೂಪುಗೊಳ್ಳುವುದಿಲ್ಲ. ತೇವಾಂಶವನ್ನು ಸಾಂದ್ರೀಕರಿಸಲು, ಅದಕ್ಕೆ ಅಂಟಿಕೊಳ್ಳುವ ಮೇಲ್ಮೈ ಅಗತ್ಯವಿದೆ. ಮೋಡದೊಳಗೆ ಗಾಳಿಯಲ್ಲಿ ಘನೀಕರಣ ನ್ಯೂಕ್ಲಿಯಸ್ ಎಂದು ಕರೆಯಲ್ಪಡುವ ಕಣಗಳಿವೆ. ಇದು ತೇವಾಂಶವನ್ನು ಒಂದುಗೂಡಿಸುವ ಆಧಾರವಾಗಿದೆ. ನ್ಯೂಕ್ಲಿಯಸ್ ಕಣಗಳನ್ನು ಶೂಟ್ ಮಾಡಲು ವಿಮಾನಗಳನ್ನು ಬಳಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಹನಿಗಳು ವಿಲೀನಗೊಂಡ ನಂತರ ಅವು ಭಾರವಾಗುತ್ತವೆ. ಆಗ ಮಳೆ ಭೂಮಿಗೆ ಬೀಳುತ್ತದೆ. ಧೂಳು ಮತ್ತು ಕೊಳೆಯಂತಹ ಸಣ್ಣ ಸಣ್ಣ ಕಣಗಳು ತೇವಾಂಶ ಘನೀಕರಿಸಲು ಪೂರಕವಾಗಿ ಮೋಡ ರಚನೆ ಮತ್ತು ಮಳೆಯಾಗಲು ಪ್ರಮುಖ ಪಾತ್ರ ವಹಿಸುತ್ತವೆ. ಸಿಲ್ವರ್ ಅಯೋಡೈಡ್ ಅದೇ ಕಾರ್ಯ ನಿರ್ವಹಿಸುತ್ತದೆ. ಡ್ರೈ ಐಸ್‌ನಂತಹ ಇತರ ವಸ್ತುಗಳನ್ನು ಸಹ ಇದೇ ಉದ್ದೇಶಗಳಿಗೆ ಬಳಸಬಹುದು.
ದುಬೈನಲ್ಲಿ ಹವಾಮಾನ ಬದಲಾವಣೆ ಪರಿಣಾಮವೇನು?
ಸಮುದ್ರ ಮಟ್ಟ: ಯುಎಇ ಸುಮಾರು 1,300 ಕಿಮೀ ಕರಾವಳಿಯನ್ನು ಹೊಂದಿದೆ. ಸುಮಾರು 85% ಜನಸಂಖ್ಯೆ ಮತ್ತು ಯುಎಇ 90% ಕ್ಕಿಂತ ಹೆಚ್ಚು ಮೂಲಸೌಕರ್ಯವು ಸಮುದ್ರಕ್ಕೆ ಹೊಂದಿಕೊಂಡಂತೆ ಇದೆ. ಸ್ಟಾಕ್‌ಹೋಮ್ ಎನ್ವಿರಾನ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಯುಎಸ್ ಸೆಂಟರ್ ವರದಿ ಪ್ರಕಾರ, ಯುಎಇಯು ತನ್ನ ಅಭಿವೃದ್ಧಿ ಹೊಂದಿದ ಕರಾವಳಿಯ 6% ಪಾಲನ್ನು ಈ ಶತಮಾನದ ಅಂತ್ಯದ ವೇಳೆಗೆ ಏರುತ್ತಿರುವ ಸಮುದ್ರ ಮಟ್ಟಗಳಿಂದ ಕಳೆದುಕೊಳ್ಳಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಮರುಭೂಮಿ ದೇಶ ದುಬೈನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ವಿಮಾನ ನಿಲ್ದಾಣ
ನೀರಿನ ವಿಪತ್ತು: ಜಾಗತಿಕ ತಾಪಮಾನವು ನೀರಿನ ಬೇಡಿಕೆ ಮತ್ತು ಲಭ್ಯತೆಯ ನಡುವಿನ ಅಂತರವನ್ನು ಹೆಚ್ಚಿಸಬಹುದು. ಯುಎಇಯ ಕೆಲವು ಸ್ಥಳಗಳು ಆಗಾಗ್ಗೆ ಪ್ರವಾಹಕ್ಕೆ ಸಾಕ್ಷಿಯಾಗುತ್ತವೆ. ಇತರೆ ಪ್ರದೇಶ ಬರ ಮತ್ತು ನೀರಿನ ಕೊರತೆಯನ್ನು ಅನುಭವಿಸುತ್ತವೆ.
ಕೃಷಿ: ಹೆಚ್ಚಿನ ತಾಪಮಾನ, ಹೆಚ್ಚಿದ ಕಳೆಗಳು ಮತ್ತು ಹಾನಿಕಾರಕ ಕೀಟಗಳು ಕೃಷಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತವೆ. ಜಾಗತಿಕ ತಾಪಮಾನವು ಜಾಗತಿಕವಾಗಿ ಆಹಾರದ ಕೊರತೆಗೆ ಕಾರಣವಾಗಬಹುದು. ಯುಎಇ ಹೆಚ್ಚು ಉಪ್ಪು ನೀರು ಕೂಡ ಕೃಷಿ ಮೇಲೆ ಪರಿಣಾಮ ಬೀರುತ್ತದೆ.
ಮಾಲಿನ್ಯ ಮತ್ತು ವಿದ್ಯುತ್ ಸರಬರಾಜು: ಜಾಗತಿಕ ತಾಪಮಾನವು ಚಳಿಗಾಲದಲ್ಲಿ ಹೀಟರ್‌ಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ಆದರೆ ಬೇಸಿಗೆಯಲ್ಲಿ ಎಸಿಗಳ ಅಗತ್ಯವನ್ನು ಹೆಚ್ಚಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯ ಸಮಯದಲ್ಲಿ ಬೃಹತ್ ಮಾಲಿನ್ಯವೂ ಹೆಚ್ಚಾಗಬಹುದು. ಯುಎಇ ಹಸಿರುಮನೆ ಅನಿಲ ಇಂಗಾಲದ ಡೈಆಕ್ಸೈಡ್‌ನ ತಲಾ 80 ಟನ್ ಹೊರಸೂಸುವಿಕೆಯನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಹವಾನಿಯಂತ್ರಣಗಳು, ಡಸಲೀಕರಣ ಘಟಕಗಳು ಮತ್ತು ವಿದ್ಯುತ್ ಕೇಂದ್ರಗಳು ಇಂಗಾಲ-ಆಧಾರಿತ ಇಂಧನದಿಂದ ಉತ್ಪತ್ತಿಯಾಗುವ ಶಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ಇದು ಮಾನವರಿಗೆ ಕೆಲವು ಹಂತಗಳಲ್ಲಿ ವಿಷಕಾರಿಯಾಗಿದೆ.
ದುಬೈ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವೇ?
ಕಳೆದ ಭಾನುವಾರ ಮತ್ತು ಸೋಮವಾರ ಮಾತ್ರ ದುಬೈನಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು. ಆ ಎರಡು ದಿನಗಳ ಬಳಿಕ ದೇಶದಲ್ಲಾಗಿರುವ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವಲ್ಲ ಎಂದು ಬ್ಲೂಮ್‌ಬರ್ಗ್‌ನ ವರದಿಗಳು ತಿಳಿಸಿವೆ. ದುಬೈನಲ್ಲಿ ಈ ಮಟ್ಟದ ಪ್ರವಾಹಕ್ಕೆ ಚಂಡಮಾರುತ ಕಾರಣ ಎಂದು ಹೇಳಲಾಗುತ್ತಿದೆ.