Districts

ಬತ್ತಿದ ತುಂಗಭದ್ರೆ: ರಾಯರ ಮಂತ್ರಾಲಯಕ್ಕೂ ತಟ್ಟಿತು ಭೀಕರ ಬರ

Published

on

Share this

– ಬಿಸಿಲಿನ ಝಳಕ್ಕೆ ಗುರು ವೈಭವೋತ್ಸವಕ್ಕೂ ಬಾರದ ಭಕ್ತರು
– ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ

ರಾಯಚೂರು: ಪ್ರತಿವರ್ಷ ಶ್ರೀ ರಾಘವೇಂದ್ರ ಸ್ವಾಮಿ ಗುರು ವೈಭವೋತ್ಸವಕ್ಕೆ ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಂತ್ರಾಲಯ ಈ ಬಾರಿ ಬಿಕೋ ಎನ್ನುತ್ತಿದೆ. ರಾಯರ ಉತ್ಸವಕ್ಕೂ ಭಕ್ತರನ್ನ ಮಠಕ್ಕೆ ಬಾರದಂತೆ ಮಾಡಿರುವ ಬರಗಾಲ ತನ್ನ ಭೀಕರತೆಯನ್ನ ತೋರಿಸಿದೆ. ತುಂಗಭದ್ರೆಯ ಒಡಲು ಬರಿದಾಗಿ ಮಂತ್ರಾಲಯದಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ.

ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಸದಾ ತುಂಬಿ ಹರಿಯುತ್ತಿದ್ದ ತುಂಗಭದ್ರೆ ಕಳೆದರೆಡು ವರ್ಷಗಳಿಂದ ಮುನಿಸಿಕೊಂಡಿದ್ದಾಳೆ. ರಾಯರ 422 ನೇ ಹುಟ್ಟುಹಬ್ಬ ಹಾಗೂ 396 ನೇ ಪಟ್ಟಾಭಿಷೇಕ ಸಂಭ್ರಮಕ್ಕೆ ಬರಗಾಲ ಬರೆ ಎಳೆದಿದೆ. ನದಿಯಲ್ಲಿ ನೀರಿಲ್ಲ, ನೆತ್ತಿಯಲ್ಲಿ ಸುಡೋ ಬಿಸಿಲು ಭಕ್ತರನ್ನ ಮಠಕ್ಕೆ ಬಾರದಂತೆ ಮಾಡಿದೆ.

ಪೂಜೆ, ರಥೋತ್ಸವಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಭಕ್ತರು ಈಗ ಮಾಯಾವಾಗಿದ್ದಾರೆ. ವಸತಿಗೃಹಗಳಲ್ಲೂ ನೀರಿನ ಸಮಸ್ಯೆಯಿರುವುದರಿಂದ ಮಠದ ಆಡಳಿದ ಮಂಡಳಿ ಪರ್ಯಾಯ ವ್ಯವಸ್ಥೆಗಳನ್ನ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಮಠ ಹಾಗೂ ರೈತರ ಅನುಕೂಲಕ್ಕಾಗಿ ತುಂಗಾಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ಮಠದ ಶ್ರೀ ಸುಬುಧೇಂದ್ರತೀರ್ಥರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮೇವು, ನೀರಿಲ್ಲದೆ ರೈತರ ಹಾಗೂ ಮಠದ ಗೋಶಾಲೆಯ ಜಾನುವಾರುಗಳು ತೊಂದರೆ ಅನುಭವಿಸುತ್ತಿವೆ. ಭಕ್ತರು ನೀಡಿದ ಮೇವು ಸಹ ಗೋಶಾಲೆಯಲ್ಲಿ ಮುಗಿದಿದ್ದು ಪರ್ಯಾಯ ಮಾರ್ಗ ತಿಳಿಯದಾಗಿದೆ. ನೀರಿನ ಸಮಸ್ಯೆಯನ್ನ ಬಗೆಹರಿಸಲು ಅಲ್ಲಲ್ಲಿ ಬೋರ್‍ವೆಲ್ ಕೊರೆಸಲಾಗಿದೆ. ಮಂತ್ರಾಲಯದ ಅಕ್ಕಪಕ್ಕದ ಗ್ರಾಮಗಳಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮಠ ಮುಂದಾಗಿದೆ.

ಒಟ್ನಲ್ಲಿ, ಬೇಸಿಗೆ ಆರಂಭದಲ್ಲೆ ಮಂತ್ರಾಲಯ ಮಠ ಭೀಕರ ಬರಗಾಲವನ್ನ ಎದುರಿಸುತ್ತಿದೆ. ನೋಟ್ ಬ್ಯಾನ್‍ನಿಂದ ಕುಗ್ಗದ್ದ ಕಾಣಿಕೆ ಹುಂಡಿಯ ಹಣ ಸಂಗ್ರಹ ಬರಗಾಲದಿಂದ ಕಡಿಮೆಯಾಗುವ ಸಾಧ್ಯತೆಗಳಿವೆ. ಸದ್ಯಕ್ಕಂತೂ ಬಿಸಿಲ ಝಳಕ್ಕೆ ಭಕ್ತರು ಮಂತ್ರಾಲಯದೆಡೆ ಸುಳಿಯುತ್ತಿಲ್ಲ.

 

Click to comment

Leave a Reply

Your email address will not be published. Required fields are marked *

Advertisement
Advertisement