ತನಗೆ ಡ್ರೋಣ್ ಪ್ರತಾಪ್ (Drone Pratap) ಅವರು 83 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎಂದು ಇಂದು ಬೆಳಗ್ಗೆಯಷ್ಟೇ ಸಾರಂಗ್ ಮಾನೆ (Sarang Mane) ಎನ್ನುವವರು ಆರೋಪ ಮಾಡಿದ್ದರು. ಡ್ರೋಣ್ ಗಳನ್ನು ರೆಡಿ ಮಾಡಿಕೊಡುವುದಾಗಿ ದುಡ್ಡು ಪಡೆದು, ಕೆಲವೇ ಡ್ರೋಣ್ ನೀಡಿದ್ದಾರೆ. ಅವೂ ಕೂಡ ಕೆಲಸ ಮಾಡುತ್ತಿಲ್ಲವೆಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಂಗ್ ಮಾನೆ, ಈ ಹಿಂದೆ ಡ್ರೋಣ್ ಮೇಲೆ ಮಾನನಷ್ಟ ಹೂಡಿದ್ದ ಡಾ.ಪ್ರಯಾಗ್ ರಾಜ್ (Prayag Raj) ಅವರನ್ನು ಸಂಪರ್ಕಿಸಿದ್ದಾರೆ.
ಈ ಕುರಿತಂತೆ ಸ್ವತಃ ಪ್ರಯಾಗ್ ಅವರೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನಾನು ಡ್ರೋಣ್ ಪ್ರತಾಪ್ ಮೇಲೆ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದೆ. ಹೀಗಾಗಿ ಡ್ರೋಣ್ ಪ್ರತಾಪ್ ಜೊತೆ ಇದ್ದ ಮಾಜಿ ಪಾರ್ಟನರ್ ಸಾರಂಗ್ ಮಾನೆ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಸಂಪರ್ಕಿಸಿದ್ರು. 83 ಲಕ್ಷ ಪ್ರತಾಪ್ ಮೋಸ ಮಾಡಿದ್ರು ಅಂತಾ ಒಂದಿಷ್ಟು ಡಾಕ್ಯುಮೆಂಟ್ ಕಳಿಸಿದ್ರು. ನಂಗೆ ಸಪೋರ್ಟ್ ಕೊಡಿ ನಾನು ಪೊಲೀಸ್ ಗೆ ದೂರು ಕೊಡಬೇಕು ಅಂತಾ ಸಾರಂಗ್ ಕೇಳಿಕೊಂಡಿದ್ದಾರೆ. ದೂರು ಕೊಡೋಕೆ ಕೂಡ ರೆಡಿಯಾಗಿದ್ದಾರೆ. ಆದರೆ, ಈಗ ಡ್ರೋಣ್ ಕಡೆಯವರು ಸಾರಂಗ್ ಗೆ ಬೆದರಿಕೆ ಹಾಕುತ್ತಿದ್ದಾರೆ’ ಆರೋಪ ಮಾಡಿದ್ದಾರೆ.
ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು. ಆದರೆ, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎನ್ನುವುದು ಮಾನೆ ಆರೋಪಕ್ಕೆ.
ಇದರ ಸತ್ಯಾಸತ್ಯೆ ಏನು ಎನ್ನುವುದನ್ನು ಡ್ರೋಣ್ ಪ್ರತಾಪ್ ಅವರೇ ಬಹಿರಂಗ ಪಡಿಸಬೇಕು. ಇನ್ನೇನು ಎರಡ್ಮೂರು ದಿನದೊಳಗೆ ಬಿಗ್ ಬಾಸ್ ಮನೆಯಿಂದ ಡ್ರೋಣ್ ಆಚೆ ಬರ್ತಾರೆ. ಅವಾಗ ಸ್ಪಷ್ಟ ಉತ್ತರ ಸಿಗಬಹುದು.