ಮೈಸೂರು: ಕಬಿನಿಯಿಂದ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ನಂಜನಗೂಡು ತಾಲೂಕಿನ ಹಲವೆಡೆ ಪ್ರವಾಹ ಉಂಟಾಗಿದ್ದು, ಪ್ರವಾಹದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸುತ್ತೂರು ಶ್ರೀ ಕ್ಷೇತ್ರದ ಸುತ್ತ ಕಪಿಲಾ ನದಿಯ ನೀರು ಹರಿಯುತ್ತಿದೆ. ಪರಿಣಾಮ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿನ ದೃಶ್ಯ ಮತ್ತು ಗದ್ದೆಗಳ ಮೇಲೆ ಹರಿಯುತ್ತಿರುವ ನೀರಿನ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಇಂದು ಮೈಸೂರಿನ ನಂಜನಗೂಡಿನಲ್ಲಿ ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಕಬಿನಿ ಜಲಾಶಯದಿಂದ ಬರೋಬ್ಬರಿ 80 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿತ್ತು. ಆದರೆ ಕೇರಳದ ವೈನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕಬಿನಿ ಡ್ಯಾಂನಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದೆ. ನೀರಿನ ಪ್ರಮಾಣ 80 ಸಾವಿರದಿಂದ 40 ಸಾವಿರ ಕ್ಯೂಸೆಕ್ಸ್ ಗೆ ಇಳಿದಿದೆ. ಆದರೂ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸದ್ಯಕ್ಕೆ ಮೂರು ದಿನಗಳ ನಂತರ ನಂಜನಗೂಡು ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
Advertisement
Advertisement
ಕಳೆದ 4 ದಿನಗಳಿಂದ ಕಬಿನಿ ಜಲಾಶಯದಿಂದ ಅತಿ ಹೆಚ್ಚು ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಸೇತುವೆಗಳು ಬಿರುಕು ಬಿಟ್ಟಿವೆ. ಮೈಸೂರಿನ ಹೆಚ್.ಡಿ.ಕೋಟೆಯ ಹರದನಹಳ್ಳಿ ಶಂಕರಹಳ್ಳಿ ಮಾರ್ಗದ ಸೇತುವೆಯಲ್ಲಿ ಬಿರುಕು ಮೂಡಿದೆ. ಸೇತುವೆ ಮೇಲ್ಛಾವಣಿಯಲ್ಲಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಸೇತುವೆ ಮೇಲೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಸೇತುವೆ ಮೇಲೆ ತೇಲಿ ಬಂದಿರುವ ಕಸಗಳನ್ನು ತೆಗೆದುಹಾಕಲು ಗ್ರಾಮಸ್ಥರ ಹರಸಾಹಸ ಪಡುತ್ತಿದ್ದಾರೆ. ಗ್ರಾಮಸ್ಥರೆಲ್ಲ ಒಗ್ಗೂಡಿ ಕಸ ತೆಗೆಯಲು ಮುಂದಾಗಿದ್ದಾರೆ.
ನೀರಿನ ಪ್ರವಾಹ ಪರಿಣಾಮ ಸೇತುವೆ ಪಕ್ಕದ ನೂರಾರು ಏಕರೆ ಬೆಳೆ ಹಾನಿಯಾಗಿದೆ. ರೈತರು ಬೆಳೆದಿದ್ದ ಕಬ್ಬು, ರಾಗಿ, ಭತ್ತದ ಬೆಳೆ ನಾಶವಾಗಿದೆ. ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಕೊನೆಯಲ್ಲಿ ಉದ್ಘಾಟಿಸಿದ್ದ ನಂಜನಗೂಡು ಬಳಿಯ ಹೆಜ್ಜಿಗೆ ಸೇತುವೆ ಬಿರುಕು ಮೂಡಿದೆ. ಕಪಿಲ ನದಿಯ ನೀರಿನ ರಭಸಕ್ಕೆ ಸೇತುವೆ ಬಿರುಕು ಬಿಟ್ಟಿದೆ. ಸುಮಾರು 18 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಸುಮಾರು 230ಮೀ ಉದ್ದವಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews