ಚೀತಾಗಳಿಗೆ ಕುಡಿಯಲು ನೀರು ಕೊಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಕೆಲಸದಿಂದ ವಜಾ!

Public TV
2 Min Read
Driver Who Gave Water To Cheetahs At Kuno Fired Over Violations

ಭೋಪಾಲ್: ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಚೀತಾ (Cheetahs) ಮತ್ತು ಅದರ ಮರಿಗಳಿಗೆ ನೀರು ನೀಡಿದ್ದ ಅರಣ್ಯ ಇಲಾಖೆಯ ಚಾಲಕನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಮೀಬಿಯಾದಿಂದ ಸ್ಥಳಾಂತರಿಸಲಾದ ಚೀತಾ ಜ್ವಾಲಾ ಹಾಗೂ ಅದರ ಮರಿಗಳು ಆಗ್ರಾ ಶ್ರೇಣಿಯ ಸಮೀಪವಿರುವ ಹೊಲಗಳಲ್ಲಿ ಓಡಾಡುತ್ತಿದ್ದವು. ಈ ವೇಳೆ ಚಾಲಕ ಚೀತಾ ಹಾಗೂ ಅದರ ಮರಿಗಳನ್ನು ಬಾ ಎಂದು ಕರೆದು, ನೀರು ನೀಡಿದ್ದ. ಈ ವೇಳೆ ಅವು ಬಂದು ನೀರು ಕುಡಿದಿದ್ದವು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಅಧಿಕೃತ ಸೂಚನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಜಾಗೊಂಡ ಸಿಬ್ಬಂದಿ, ಜ್ವಾಲಾ ಮತ್ತು ಅದರ ನಾಲ್ಕು ಮರಿಗಳು ಬಿಸಿಲಿನಲ್ಲಿ ತೆರೆದ ಕೃಷಿ ಹೊಲಗಳ ಬಳಿ ನಿರಂತರವಾಗಿ ಚಲಿಸುತ್ತಿದ್ದವು. ಅವುಗಳು ಸಮೀಪದ ಗ್ರಾಮಗಳ ಕಡೆಗೆ ಹೋಗುವುದನ್ನು ತಪ್ಪಿಸಿ, ಕಾಡಿನೆಡೆಗೆ ಕಳುಹಿಸಲು ನೀರು ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾನೆ.

ಮಾನವ-ಚೀತಾ ಸಂಘರ್ಷ ಉಂಟಾಗದಂತೆ ಕಾಡಿನ ಕಡೆ ತಿರುಗಿಸಲು ಮೇಲ್ವಿಚಾರಣಾ ತಂಡಕ್ಕೆ ಸಾಮಾನ್ಯವಾಗಿ ಸೂಚನೆ ನೀಡಲಾಗಿದೆ. ಚೀತಾ ಕೃಷಿ ಹೊಲಗಳಿಗೆ ಅಥವಾ ಮಾನವ ವಾಸಸ್ಥಳದ ಹತ್ತಿರ ಹೋದಾಗಲೆಲ್ಲಾ ಅವುಗಳಿಗೆ ಏನಾದರೂ ಆಮಿಷ ತೋರಿಸಿ ಕಾಡಿನ ಕಡೆ ತಿರುಗಿಸಲು ಸಿಬ್ಬಂದಿ ನೇಮಿಸಲಾಗಿದೆ. ಚೀತಾಗಳನ್ನು ಹತ್ತಿರದಲ್ಲಿ ನಿರ್ವಹಿಸಲು ಮೇಲ್ವಿಚಾರಣಾ ತಂಡಕ್ಕೆ ನೀಡಲಾದ ತರಬೇತಿಯ ಪ್ರಕಾರ, ಚಿರತೆಗಳಿಂದ ದೂರ ಸರಿಯಲು ಸ್ಪಷ್ಟ ಸೂಚನೆಗಳಿವೆ. ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಅಧಿಕೃತ ವ್ಯಕ್ತಿಗಳು ಮಾತ್ರ ಅವುಗಳ ಹತ್ತಿರ ಹೋಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 2022ರಲ್ಲಿ 8 ನಮೀಬಿಯನ್ ಚೀತಾಗಳನ್ನು ಕೆಎನ್‌ಪಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 2023 ರಲ್ಲಿ, ದಕ್ಷಿಣ ಆಫ್ರಿಕಾದಿಂದ ಅಭಯಾರಣ್ಯಕ್ಕೆ 12 ಹೆಚ್ಚಿನ ಚೀತಾಗಳನ್ನು ಸ್ಥಳಾಂತರಿಸಲಾಯಿತು. ಸಂರಕ್ಷಿತ ಅರಣ್ಯದಲ್ಲಿ ಈಗ 26 ಚೀತಾಗಳಿದ್ದು, ಅದರಲ್ಲಿ 14 ಭಾರತದಲ್ಲಿ ಜನಿಸಿದ ಮರಿಗಳು ಸೇರಿವೆ.

Share This Article