ಪಣಜಿ: ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿ ಚಾಲಕರೊಬ್ಬರು ಹಳಿ ಮೇಲೆ ಬಂದ 4 ವರ್ಷದ ಬಾಲಕನ ಜೀವವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಗೋವಾದ ಬಲ್ಲಿ ಮತ್ತು ಮಾರ್ಗೋವಾ ರೈಲ್ವೇ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ಸೋಮವಾರ ನಾಲ್ಕು ವರ್ಷದ ಬಾಲಕನೊಬ್ಬನು ರೈಲಿನ ಹಳಿ ಮೇಲೆ ಓಡಾಡುತ್ತಿದ್ದನು. ರೈಲು ಬರುತ್ತಿದ್ದರೂ ಏನು ಅರಿಯದೆ ಬಾಲಕ ಹಳಿಗಳ ಮೇಲೆ ಬಂದಿದ್ದಾನೆ. ಈ ವೇಳೆ ಪರ್ನೆಮ್-ಕಾರವಾರ ರೈಲಿನ ಚಾಲಕ ಸುರೇಶ್ ಬಾಲಕನ್ನು ದೂರದಿಂದಲೇ ಗಮನಿಸಿ ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಒಂದು ಪುಟ್ಟ ಜೀವ ಉಳಿದುಕೊಂಡಿದೆ.
Advertisement
Advertisement
ರೈಲು ನಿಲ್ಲಿಸಿದ ಬಳಿಕ ಸ್ವಲ್ಪವೇ ಅಂತರದಲ್ಲಿದ್ದ ಮಗುವನ್ನು ಚಾಲಕ ಓಡಿ ಹೋಗಿ ರಕ್ಷಿಸಿದ್ದಾರೆ. ಬಳಿಕ ಚಾಲಕ ಬಲ್ಲಿ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಬಳಿ ಮಗುವನ್ನು ಕೊಟ್ಟು, ಪೋಷಕರಿಗೆ ಒಪ್ಪಿಸುವಂತೆ ಹೇಳಿ, ನಂತರ ತಮ್ಮ ಕೆಲಸಕ್ಕೆ ಹಿಂತಿರುಗಿದ್ದಾರೆ.
Advertisement
ಪೋಷಕರಿಂದ ತಪ್ಪಿಸಿಕೊಂಡಿದ್ದ ಈ ಮಗುವನ್ನು ರೈಲ್ವೇ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸರು ವಿಚಾರಣೆ ನಡೆಸಿ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ್ದು, ಬಿಹಾರ್ ಮೂಲದವರಾದ ಮಗುವಿನ ಹೆತ್ತವರು ಬಲ್ಲಿಯಲ್ಲಿ ವಾಸವಾಗಿದ್ದಾರೆ ಎಂದು ವಿಚಾರಣೆ ಬಳಿಕ ತಿಳಿದುಬಂದಿದೆ. ಸದ್ಯ ಬಾಲಕನನ್ನು ಹೆತ್ತವರ ಮಡಿಲಿಗೆ ಪೊಲೀಸರು ಸುರಕ್ಷಿತವಾಗಿ ಸೇರಿಸಿದ್ದಾರೆ. ಹಾಗೆಯ ರೈಲು ಚಾಲಕನ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.