ಕೊಲ್ಕತ್ತಾ: ಅನಾರೋಗ್ಯದಿಂದ ಪ್ರಜ್ಞೆ ತಪ್ಪಿದ ಪರಿಣಾಮ ಚಲಿಸುತ್ತಿದ್ದ ರೈಲಿನಿಂದ ಚಾಲಕರೊಬ್ಬರು ಹೊರಗಡೆ ಬಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಡ್ರೈವರ್ ಕೆಳಕ್ಕೆ ಬಿದ್ದ ತಕ್ಷಣ ರೈಲು ನಿಲುಗಡೆಯಾಗಿದೆ. ರೈಲು ಚಾಲನೆ ಮಾಡಲು ಚಾಲಕ ಅಸಮರ್ಥನಾದ ಸಂದರ್ಭದಲ್ಲಿ ತಾನಾಗೇ ಆನ್ ಆಗುವ “ಡೆಡ್ ಮ್ಯಾನ್ ಸ್ವಿಚ್” ಮೇಲಿಂದ ಚಾಲಕ ಕೈ ತೆಗೆದಿದ್ದರಿಂದ ರೈಲು ತಾನಾಗೇ ನಿಲುಗಡೆಯಾಗಿದೆ ಎಂದು ತಿಳಿದು ಬಂದಿದೆ.
Advertisement
ಕೊಲ್ಕತ್ತಾದಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ದೈನ್ಹಾಟ್ ರೈಲ್ವೇ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬುದ್ರ್ವನ್ ಜಿಲ್ಲೆಯ ಹೌರಾ ನಿಲ್ದಾಣದಿಂದ ಕಟ್ವಾನ್ ನಗರಕ್ಕೆ ರೈಲು ಪ್ರಯಾಣಿಸುತ್ತಿತ್ತು. ರೈಲಿನಿಂದ ಬಿದ್ದ ಚಾಲಕನನ್ನು ಹಾಲ್ದರ್ ಎಂದು ಗುರುತಿಸಲಾಗಿದ್ದು, ಚಾಲಕನ ತಲೆಗೆ ತೀವ್ರವಾದ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೂರ್ವ ರೈಲ್ವೆಯ ಅಧಿಕಾರಿ ಆರ್. ಮಹಾಪಾತ್ರ ತಿಳಿಸಿದ್ದಾರೆ.
Advertisement
ಹಾಲ್ದರ್ ಅವರು ರೈಲ್ವೇ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ತಾನು ಅನಾರೋಗ್ಯಕ್ಕೆ ಒಳಗಾಗಿ, ಇದ್ದಕ್ಕಿದ್ದ ಹಾಗೇ ತಲೆಸುತ್ತಿ ಬಂತು ಎಂದು ಹೇಳಿದ್ದಾರೆ. ಚಾಲಕ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ರೈಲು ಟ್ರ್ಯಾಕ್‍ಗಳನ್ನು ಬದಲಿಸುತ್ತಿತ್ತು. ಮಧ್ಯಾಹ್ನದ ವೇಳೆಗೆ ಚಾಲಕ ರೈಲಿನಿಂದ ಬೀಳೋದನ್ನ ಪ್ರತ್ಯಕ್ಷದರ್ಶಿಗಳು ಗಮನಿಸಿದ್ದರು. ಕೂಡಲೇ ಸ್ಥಳದಲ್ಲಿ ಜನಗಂಗುಳಿಯೇ ನೆರೆದಿತ್ತು. ನಂತರ ರೈಲ್ವೆ ಗಾರ್ಡ್ ಸ್ಥಳಕ್ಕೆ ದೌಡಾಯಿಸಿ ಚಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯುವಂತೆ ನೋಡಿಕೊಂಡ್ರು. ನಂತರ ಹೊಸ ಚಾಲಕ ಹಾಗೂ ಗಾರ್ಡ್‍ನನ್ನು ಕರೆಸಿದ್ದು, ಮಧ್ಯಾಹ್ನ 12.46 ಕ್ಕೆ ರೈಲು ಪ್ರಯಾಣ ಆರಂಭಿಸಿತು. ಘಟನೆಯಿಂದಾಗಿ ಇನ್ನೂ ಎರಡು ರೈಲುಗಳ ಸಂಚಾರ ತಡವಾಗಿತ್ತು.
Advertisement
ರೈಲ್ವೆ ಅಧಿಕಾರಗಳು ಚಾಲಕನ ಆರೋಗ್ಯ ಸ್ಥಿತಿಯನ್ನ ಪರಿಶೀಲಿಸಲಿದ್ದಾರೆ. ಹೌರಾದಲ್ಲಿ ಚಾಲಕ ರೈಲನ್ನು ಏರಿದಾಗ ಚೆನ್ನಾಗಿಯೇ ಇದ್ದರು ಎಂದು ಮಹಾಪಾತ್ರ ತಿಳಿಸಿದ್ದಾರೆ.