ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೋರ್ವ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಎನ್‌ಎಚ್-66ರಲ್ಲಿ ನಡೆದಿದೆ.
ಕಾರು ಚಲಾಯಿಸುತ್ತಿದ್ದ ಹೊನ್ನಾವರದ ಹರೀಶ್ ನಾಯ್ಕ್ (30) ಮೃತ ವ್ಯಕ್ತಿ. ಚಾಲಕನೊಂದಿಗೆ ಪಯಣಿಸುತಿದ್ದ ಹೊನ್ನಾವರದ ದಿನೇಶ್ ಆಚಾರ್ಯ (45) ಗಂಭೀರ ಗಾಯಗೊಂಡಿದ್ದಾರೆ.
ಟಾಟಾ ನ್ಯಾನೋ ಕಾರಿನಲ್ಲಿ ಹೊನ್ನಾವರದಿಂದ ಅಂಕೋಲಾದತ್ತ ಹರೀಶ್ ಹಾಗೂ ದಿನೇಶ್ ಪ್ರಯಾಣಿಸುತ್ತಿದ್ದರು. ಕಾರು ಅತೀ ವೇಗದಲ್ಲಿದ್ದ ಕಾರಣ ಕೊಡಸಣಿ ಕ್ರಾಸ್‌ನಲ್ಲಿ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿ ಘಟನೆ ನಡೆದಿದೆ.
ಗಂಭೀರ ಗಾಯಗೊಂಡ ದಿನೇಶ್ ಆಚಾರ್ಯ ಎಂಬವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.