ಗಾಂಧಿನಗರ: ಕಳೆದ ವರ್ಷ ಜೂನ್ ತಿಂಗಳಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರ ನಾಪತ್ತೆ ಪ್ರಕರಣವನ್ನು ಬೇಧಿಸುವಲ್ಲಿ ಗುಜರಾತ್ ಪೊಲೀಸರು ಯಶಸ್ವಿಯಾಗಿದ್ದು, ಈ ಕುರಿತು ಆರು ಮಂದಿ ಆರೋಪಿಗಳನ್ನು ಭುಜ್ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಪತಿಯೇ ಆಕೆಯನ್ನು ಕೊಲೆ ಮಾಡಿದ್ದು, ಪತ್ನಿಯನ್ನು ಕೊಲೆ ಮಾಡಲು ಬಹುಭಾಷೆಯಲ್ಲಿ ತೆರೆಕಂಡ ‘ದೃಶ್ಯ’ ಸಿನಿಮಾ ನೋಡಿ ಹತ್ಯೆ ಯೋಜನೆಯನ್ನು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ. ರುಕ್ಸಾನಾ ಮೃತ ದುರ್ದೈವಿ. ನಿರ್ಮಾಣ ಹಂತದ ಕಟ್ಟಡದಲ್ಲಿ ರುಕ್ಸಾನಾ ಅವರನ್ನು ಕೊಲೆ ಮಾಡಿ ಸಮಾಧಿ ಮಾಡಿದ್ದಾರೆ. ಮಹಿಳೆಯ ಮೃತದೇಹದ ಅವಶೇಷಗಳನ್ನು ಪೊಲೀಸರು ಸಮಾಧಿ ಸ್ಥಳದಿಂದ ಮೇಲಕ್ಕೆ ಎತ್ತಿದ್ದಾರೆ.
Advertisement
Advertisement
ಬಂಧಿತರನ್ನು ರುಕ್ಸಾನಾ ಅವರ ಪತಿ ಇಸ್ಮಾಯಿಲ್ ಅಲಿಯಾಸ್ ಮಾಲೋ ಹುಸೇನ್ ಮಜೋತಿ, ಆತನ ಸಂಬಂಧಿ ಜಾವೇದ್ ಮಜೋತಿ, ಜಾವೇದ್ ಗೆಳೆಯ ಸ್ನೇಹಿತ ಸಾಜೀದ್ ಖಲೀಫಾ ಮತ್ತು ಆತನ ಪತ್ನಿ ಸೈಮಾ, ಶಬ್ಬೀರ್ ಜುಸಾಬ್ ಮತ್ತು ಅಲ್ತಾಫ್ ಮಜೋತಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಏನಿದು ಪ್ರಕರಣ?
ಆರೋಪಿ ಇಸ್ಮಾಯಿಲ್ 2018 ಜನವರಿಯಲ್ಲಿ ಮುಂಬೈನ ನಾಜಿಯ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದನು. ಈ ಬಗ್ಗೆ ತಿಳಿದ ಮೃತ ರುಕ್ಸಾನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ಅದರಂತೆಯೇ ಜೂನ್ 9 ರಂದು ಕಾರಿನಲ್ಲಿಯೇ ಚಾಕುವಿನಿಂದ ಇರಿದು ರುಕ್ಸಾನಾನನ್ನು ಕೊಲೆ ಮಾಡಿದ್ದಾರೆ. ಬಳಿಕ ಐಶಾ ಪಾರ್ಕ್ ಬಳಿ ಇದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಆಕೆಯನ್ನು ಸಮಾಧಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ರಕ್ತದ ಕಲೆಯಾಗಿದ್ದ ಕಾರು ಸೀಟನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದರು.
Advertisement
ಆರು ತಿಂಗಳ ನಂತರ ಅಕ್ರಮ ಒತ್ತುವರಿ ಜಾಗದಲ್ಲಿ ನಿರ್ಮಿಸಿದ ಕಾರಣಕ್ಕೆ ಸರ್ಕಾರ ರುಕ್ಸಾನಾ ಮೃತದೇಹವನ್ನು ಹೂತಿಟ್ಟಿದ್ದ ಕಟ್ಟಡವನ್ನು ನಾಶ ಪಡಿಸಲು ಆರಂಭಿಸಿದೆ. ಆಗ ಆರೋಪಿ ಇಸ್ಮಾಯಿಲ್ ಸ್ನೇಹಿತ ಮಮದ್ ಕುಂಭಾರ್ ಎಂಬಾತನ ಸಹಾಯದಿಂದ ಶವವನ್ನು ಅಲ್ಲಿಂದ ತೆಗೆದು ಸಿಮಂಧರ್ ನಗರದಲ್ಲಿದ್ದ ಇನ್ನೊಂದು ನಿರ್ಮಾಣ ಹಂತದ ಕಟ್ಟಡದಲ್ಲಿ ಹೂತು ಹಾಕಿದ್ದನು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಆರೋಪಿ ಪತಿ ತನ್ನ ಮೇಲೆ ಅನುಮಾನ ಬರಬಾರದೆಂದು ಭುಜ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದನು. ನಾಲ್ಕು ತಿಂಗಳ ನಂತರ ಮತ್ತೆ ನನ್ನ ಪತ್ನಿ ನಾಪತ್ತೆ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿಲ್ಲ ಎಂದು ಗುಜರಾತಿನ ಹೈಕೋರ್ಟ್ ಮೆಟ್ಟಿಲೇರಿದ್ದನು.
ಜೂನ್ 10 ರಂದು ಮೃತಳ ತಾಯಿ ಮತ್ತು ಸಹೋದರ ಭುಜ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನಾವು ಈ ಪ್ರಕರಣದ ಆರಂಭದಿಂದಲೂ ಆರೋಪಿ ಇಸ್ಮಾಯಿಲ್ ಮೇಲೆ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಇಸ್ಮಾಯಿಲ್ ಮೇಲೆ ಕಣ್ಣಿಟ್ಟಿದ್ದು, ರಹಸ್ಯವಾಗಿ ತನಿಖೆ ಮಾಡುತ್ತಿದ್ದೆವು. ಕೆಲವು ದಿನಗಳ ಹಿಂದೆ ಮೀರತ್‍ನಲ್ಲಿ ಜಾವೇದ್ ನನ್ನು ಬಂಧಿಸಲಾಗಿತ್ತು. ಆತನನ್ನು ವಿಚಾರಣೆ ಮಾಡಿದಾಗ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.