ಸಿಎಂ ಕರ್ಮಭೂಮಿಯಲ್ಲಿ ನೀರಿಗೆ ಹಾಹಾಕಾರ – ಕಾಂಗ್ರೆಸ್ ಸದಸ್ಯರ ವಾರ್ಡಿಗೆ ನೀರಿಲ್ಲ

Public TV
2 Min Read
RMG WATER

– ಜೆಡಿಎಸ್ ಸದಸ್ಯರ ವಾರ್ಡಿಗೆ ಮಾತ್ರ ಜಲಭಾಗ್ಯ
– ರಸ್ತೆ ತಡೆ ನಡೆಸಿ ಜನರ ಪ್ರತಿಭಟನೆ

ರಾಮನಗರ: ರೇಷ್ಮೆನಗರಿ ರಾಮನಗರ ಸಿಎಂ ಕುಮಾರಸ್ವಾಮಿಯವರ ರಾಜಕೀಯ ಕರ್ಮಭೂಮಿ. ಆದರೆ ಸ್ವಕ್ಷೇತ್ರದಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನ ಕುಡಿಯುವ ನೀರಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಎಂ ಕುಮಾರಸ್ವಾಮಿ ಅವರ ರಾಜಕೀಯ ಕರ್ಮ ಭೂಮಿ ರಾಮನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಬೇಸಿಗೆ ಆರಂಭದಲ್ಲೇ ಜೋರಾಗಿದೆ. 10ರಿಂದ 15ದಿನಗಳು ಕಾದರೂ ಒಂದು ಹನಿ ನೀರು ಸಿಗದಂತಹ ಪರಿಸ್ಥಿತಿ ನಗರ ಪ್ರದೇಶದಲ್ಲಿಯೇ ನಿರ್ಮಾಣವಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ರೊಚ್ಚಿಗೆದ್ದು ರಾಮನಗರ-ಜಾಲಮಂಗಲ ರಸ್ತೆ ತಡೆ ನಡೆಸಿ, ರಸ್ತೆಯಲ್ಲಿಯೇ ಖಾಲಿ ಕೊಡಗಳನ್ನ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಜಲಮಂಡಳಿ ಎಂಜಿನಿಯರ್ ಹಾಗೂ ನಗರಸಭೆ ಪೌರಾಯುಕ್ತೆ ಶುಭಾ ಜೊತೆ ಕೂಡ ವಾಗ್ದಾದ ನಡೆಸಿದ್ದಾರೆ.

vlcsnap 2019 03 09 09h36m36s112

ರಾಮನಗರ ನಗರದ ಬಹುತೇಕ ಎಲ್ಲಾ ವಾರ್ಡ್ ಗಳಲ್ಲಿ 10, 12, 15 ದಿನಗಳಿಗೊಮ್ಮೆ, ಅದು ಅರ್ಧಗಂಟೆಗಳ ಕಾಲ ಕುಡಿಯುವ ನೀರನ್ನ ಪೂರೈಕೆ ಮಾಡಲಾಗುತ್ತಿದೆ. ಅದು ಯಾವ ಸಮಯದಲ್ಲಿ ನೀರು ಬಿಡುತ್ತಾರೆ ಎಂಬ ಬಗ್ಗೆಯೂ ಕೂಡ ಜನರಿಗೆ ತಿಳಿಯುವುದಿಲ್ಲ. ತಮ್ಮೆಲ್ಲ ಕೆಲಸ ಕಾರ್ಯಗಳನ್ನ ಬಿಟ್ಟು ನೀರಿಗೋಸ್ಕರವೇ ರಾತ್ರಿ ಕೂಡ ಕಾಯುವಂತಹ ಪರಿಸ್ಥಿತಿ ಸಹಾ ನಿರ್ಮಾಣವಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಜನಪ್ರತಿನಿಧಿಗಳ ಬಳಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಿಲ್ಲದಂತೆ ಆಗಿದೆ. ಅಲ್ಲದೇ ಜೆಡಿಎಸ್ ಸದಸ್ಯರು ಇರುವ ವಾರ್ಡ್ ಗಳಿಗೆ ಮಾತ್ರ ನಾಲ್ಕು ದಿನಗಳಿಗೆ ಒಮ್ಮೆ ನೀರು ಬಿಡಲಾಗುತ್ತಿದೆ. ಕಾಂಗ್ರೆಸ್ ಸದಸ್ಯರಿರುವ ವಾರ್ಡ್ ಗಳಲ್ಲಿ 10 ರಿಂದ 15 ದಿನಗಳಿಗೆ ನೀರು ಬಿಡ್ತಾರೆ ಎಂದು ಸ್ಥಳೀಯರಾದ ಪ್ರೇಮ ಹೇಳಿದ್ದಾರೆ.

vlcsnap 2019 03 09 09h35m11s121

ಈ ಬಗ್ಗೆ ನಗರಸಭೆ ಪೌರಾಯುಕ್ತೆ ಶುಭಾ ಅವರನ್ನ ಕೇಳಿದರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಬೇಸಿಗೆಯ ಆರಂಭದಲ್ಲಿಯೇ ರಾಮನಗರ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *