ಜೈಪುರ್: DRDO ವಿಜ್ಞಾನಿಗಳ ಮೇಲೆ ನಿಗಾ ಇಟ್ಟು, ಅವರ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಜೈಸಲ್ಮೇರ್‌ನಲ್ಲಿರುವ ಡಿಆರ್‌ಡಿಒದ ಅತ್ಯಂತ ಅತಿಥಿ ಗೃಹದ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅತಿಥಿ ಗೃಹದಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಉತ್ತರಾಖಂಡ ಮೂಲದ ಮಹೇಂದ್ರ ಪ್ರಸಾದ್ (32) ಎಂದು ಗುರುತಿಸಲಾಗಿದೆ. ಈತ ಉನ್ನತ ವಿಜ್ಞಾನಿಗಳ ಇಮೇಲ್‌ಗಳು ಮತ್ತು ದೂರವಾಣಿ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದ. ಅವನ್ನೆಲ್ಲ ಪಾಕಿಸ್ತಾನಕ್ಕೆ ಹಂಚಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ರಾಜಸ್ಥಾನದ ಸರ್ಕಾರಿ ನೌಕರ ಅರೆಸ್ಟ್
ಪತ್ರಗಳಲ್ಲಿರುವ ಇಮೇಲ್ ಹಾಗೂ ಮೊಬೈಲ್ ನಂಬರ್‌ಗಳನ್ನು ಕಲೆಹಾಕಿ ಪಾಕ್‌ನ ಏಜೆಂಟ್‌ಗೆ ಕಳುಹಿಸಿದ್ದಾನೆ. ಅಲ್ಲದೇ ಪಾಕಿಸ್ತಾನದಲ್ಲಿ ಆರೋಪಿಯ ನಿರ್ವಾಹಕ ʻಕರ್ನಲ್ʼ ಆಗಿದ್ದು, ಅವನು ವಾಟ್ಸಾಪ್ ಮೂಲಕ ಸಂವಹನ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ವಿಜ್ಞಾನಿಗಳ ಗುಂಪು ಅತಿಥಿ ಗೃಹಕ್ಕೆ ಭೇಟಿ ನೀಡುತ್ತಿದ್ದರೆ, ಆ ತಂಡದಲ್ಲಿ ಯಾರು ನಾಯಕರು? ಯಾರೆಲ್ಲ ಆ ತಂಡದಲ್ಲಿರುತ್ತಾರೆ ಎಂಬ ಮಾಹಿತಿಯು ಆರೋಪಿಗೆ ಇರುತ್ತಿತ್ತು. ಈತನ ಮಾಹಿತಿಯಿಂದ ಚಂದನ್ ಮತ್ತು ಪೋಖ್ರಾನ್‌ನಲ್ಲಿ ನಡೆಯುತ್ತಿರುವ ರಕ್ಷಣಾ ವ್ಯವಸ್ಥೆಗಳ ಪ್ರಯೋಗಗಳ ಬಗ್ಗೆ ಶತ್ರು ದೇಶಕ್ಕೆ ಸಮಗ್ರ ಕಲ್ಪನೆಯನ್ನು ನೀಡಿರಬಹುದು. ಪಿನಾಕಾ ರಾಕೆಟ್ ವ್ಯವಸ್ಥೆಯ ಮಾಹಿತಿಯನ್ನು ಈತ ಸೋರಿಕೆ ಮಾಡಿರಬಹುದು ಎಂದು ಮೂಲಗಳು ತಿಳಿಸಿವೆ.
ಬಂಧಿತನಿಂದ 2 ಫೋನ್ ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಈತ ಪಾಕ್ ಜೊತೆ ಸಂಬಂಧ ಹೊಂದಿರುವುದು ಬಯಲಾಗಿದೆ. ಈತನಿಗೆ ಸಂದಾಯವಾಗುತ್ತಿದ್ದ ಹಣದ ಜಾಡನ್ನು ಇನ್ನೂ ಪತ್ತೆಹಚ್ಚಿಲ್ಲ. ಅವನಿಗೆ ನಗದು ರೂಪದಲ್ಲಿ ಹಣ ನೀಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇಷ್ಟೇ ಅಲ್ಲದೇ ಆಪರೇಷನ್ ಸಿಂಧೂರ್ ಸಮಯದಲ್ಲೂ ಈತ ಈ ಅತಿಥಿ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಒಂದು ವಾರದ ತೀವ್ರ ವಿಚಾರಣೆಯ ನಂತರ ಆರೋಪಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿ ಎರಡು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ಈತ ಐದು ವರ್ಷಗಳಿಂದ ಅತಿಥಿ ಗೃಹದಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ಪ್ರಕರಣದ ಬಳಿಕ, ಗುತ್ತಿಗೆಯ ಆಧಾರದ ಮೇಲೆ ಹೊರಗಿನ ವ್ಯಕ್ತಿಗೆ ಅತಿಥಿ ಗೃಹ ನಿರ್ವಹಿಸುವ ಕೆಲಸ ನೀಡಿದ್ದಕ್ಕೆ ಗುಪ್ತಚರ ಬ್ಯೂರೋ ಕಳವಳ ವ್ಯಕ್ತಪಡಿಸಿದೆ.
ಭಾರತದ ಉನ್ನತ ವಿಜ್ಞಾನಿಗಳು ಕ್ಷಿಪಣಿ, ರಕ್ಷಣಾ ವ್ಯವಸ್ಥೆಯ ಪ್ರಯೋಗಗಳು ಮತ್ತು ಪರೀಕ್ಷೆಗಾಗಿ ಪೋಖ್ರಾನ್ ಮತ್ತು ಚಂದನ್‌ಗೆ ಬಂದಾಗ ಈ ಅತಿಥಿ ಗೃಹವನ್ನು ಅವರಿಗಾಗಿ ಮೀಸಲಿಡಲಾಗುತ್ತದೆ. ಯಾವುದೇ ನಾಗರಿಕರಿಗೆ ಇದರ ಆವರಣದೊಳಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ CRPF ಸಿಬ್ಬಂದಿ ಅರೆಸ್ಟ್ – ಜೂ.6ರ ವರೆಗೆ NIA ಕಸ್ಟಡಿಗೆ