ಬೆಂಗಳೂರು: ರಾಜಧಾನಿಯಲ್ಲಿ ಎಂತೆಂಥಾ ದಂಧೆಗಳು ನಡೆಯುತ್ತದೆ ಅಂದರೆ ಎಂತವರು ಶಾಕ್ ಆಗಲೇಬೇಕು. ಬೆಂಗಳೂರಿನಲ್ಲಿ(Bengaluru) ಸಣ್ಣ ಮಳೆಗೂ(Rain) ಮುಳುಗುವ ಮನೆ, ರಸ್ತೆ ಅಂಗಡಿಗಳ ಹಿಂದೆ ದೊಡ್ಡದೊಂದು ಮಾಫಿಯಾ ಕೆಲಸ ಮಾಡುತ್ತಿರುವುದು ಈಗ ಸಾಕ್ಷ್ಯ ಸಮೇತ ದೃಢಪಟ್ಟಿದೆ.
ಅನಾಮಿಕ ವ್ಯಕ್ತಿಗಳು ರಸ್ತೆಯ ಬದಿಯಲ್ಲಿರುವ ಡ್ರೈನೇಜ್ ಬ್ಲಾಕ್‍ಗೆ(Drainage Block) ಇಳಿದು ಮರಳಿನ ಮೂಟೆ, ಅಕ್ಕ-ಪಕ್ಕದ ರಸ್ತೆಯ ದೊಡ್ಡ ದೊಡ್ಡ ಸೈಜುಗಲ್ಲನ್ನು ಡ್ರೈನೇಜ್‍ನೊಳಗೆ ಹಾಕುತ್ತಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ಈ ಸ್ಪೋಟಕ ಘಟನೆ ಸೆರೆಯಾಗಿದ್ದು ಬೆಂಗಳೂರಿನ ಪ್ರತಿಷ್ಠಿತ ಇಂದಿರಾ ನಗರದಲ್ಲಿ. ಇತ್ತೀಚೆಗೆ ಸಣ್ಣ ಮಳೆ ಬಂದಾಗಲೂ ಬಡಾವಣೆಗಳು ಅಂಗಡಿಗಳು ಜಲಾವೃತಗೊಂಡಿತ್ತು. ಭಾರೀ ಮಳೆ ಸುರಿದರೂ ಜಲಾವೃತವಾಗದೇ ಇದ್ದ ಬಡಾವಣೆ ಸಣ್ಣ ಮಳೆಗೆ ಹೇಗೆ ಜಲಾವೃತವಾಯಿತು ಎಂಬುದೇ ಇವರ ತಲೆನೋವಿಗೆ ಕಾರಣವಾಗಿತ್ತು. ಹೀಗಾಗಿ ಜನ ಕಳೆದ ತಾವು ಪಟ್ಟ ಬವಣೆಯ ದೃಶ್ಯಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸಲು ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯ ಕಲೆಹಾಕಲು ಮುಂದಾಗಿದ್ದಾರೆ. ಆಗ ಅಪರಿಚಿತ ವ್ಯಕ್ತಿಗಳು ಬಂದು ಒಳ ಚರಂಡಿ ವ್ಯವಸ್ಥೆಯನ್ನು ಬ್ಲಾಕ್ ಮಾಡುತ್ತಿರುವ ದೃಶ್ಯ ನೋಡಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕ ಕೊಡುಗೆ ಗುರಿ – ಮೇಲ್ವಿಚಾರಣೆಗೆ ವಿಶೇಷ ತಂಡ ರಚನೆ
ಮಳೆ ಬರುವ ಸಂದರ್ಭದಲ್ಲಿ ಈ ರೀತಿ ಡ್ರೈನೇಜ್ ಬ್ಲಾಕ್ ಮಾಡಿದಾಗ ಸಣ್ಣ ಮಳೆಗೂ ಇಡೀ ಮನೆ ಅಕ್ಕಪಕ್ಕದ ಅಂಗಡಿ ರಸ್ತೆ ಮುಳುಗಡೆಯಾಗುತ್ತದೆ. ಕೂಡಲೇ ಬಿಬಿಎಂಪಿ(BBMP) ಎಮರ್ಜೆನ್ಸಿ ದುರಸ್ತಿ ಮಾಡಲು ಕೆಲ ಗುತ್ತಿಗೆದಾರರಿಗೆ ಕೆಲಸ ನೀಡುತ್ತದೆ. ದುಡ್ಡು ಮಾಡುವ ದಂಧೆಗಾಗಿ ಈ ಕೃತ್ಯ ಎಸಗಲಾಗುತ್ತಿದೆ ಎಂದು ಇಂದಿರಾನಗರದ ಜನ ಆರೋಪ ಮಾಡಿದ್ದಾರೆ.