ಬೆಂಗಳೂರು/ದಾವಣಗೆರೆ: ಹೀಮೊಫಿಲಿಯಾ(Hemophilia) ವಿರುದ್ಧ ಹೋರಾಟ ನಡೆಸುತ್ತಿರುವ ಡಾ.ಸುರೇಶ್ ಹನಗವಾಡಿ (Dr Suresh Hanagavadi) ಅವರು ಪ್ರತಿಷ್ಠಿತ ಪದ್ಮಶ್ರೀ (Padma Shri) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸ್ವತಃ ಹಿಮೋಫಿಲಿಯಾ ಬಾಧಿತರಾಗಿರುವ ಡಾ. ಸುರೇಶ್ ಹನಗವಾಡಿ ತಮ್ಮಂತೆಯೇ ಬೇರೆಯವರು ಸಮಸ್ಯೆಗೆ ತುತ್ತಾಗಬಾರದು ಮಹತ್ವದ ಉದ್ದೇಶದಿಂದ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಪ್ರಾರಂಭಿಸುವ ಮೂಲಕ ಹಿಮೋಫಿಲಿಯಾ(ಕುಸುಮರೋಗ) ಬಾಧಿತರಿಗೆ ಸಕಾಲಿಕ ಚಿಕಿತ್ಸೆ ನೀಡುತ್ತಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಸುರೇಶ್ ಹನಗವಾಡಿ ಮಾತನಾಡಿ, ನನಗೆ ತುಂಬಾ ಖುಷಿ ತಂದ ದಿನ. ನಾನು ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ. ಪ್ರಶಸ್ತಿ ಲಭಿಸಿದ ಬಳಿಕ ಜವಾಬ್ದಾರಿ ಹೆಚ್ಚಾಗಿದೆ. ನಾನು ಕೂಡ ಹಿಮೋಫಿಲಿಯಾ ಪೀಡಿತನಾಗಿದ್ದು ಆಗ ರಕ್ತ ಪರೀಕ್ಷೆ ಮಾಡುತ್ತಿರಲಿಲ್ಲ. ನಮ್ಮ ಮಾವ ಇದೇ ಖಾಯಿಲೆಯಿಂದ ನಿಧನರಾದರು. ಅಂದು ನಾನು ಡಾಕ್ಟರ್ ಆಗಬೇಕು ಎಂದು ಪಣತೊಟ್ಟು ಹಿಮೋಫಿಲಿಯಾಗೆ ಚಿಕಿತ್ಸೆ ನೀಡುತ್ತಿದ್ದೇನೆ ಎಂದರು.
ನನ್ನ ಶ್ರಮದ ಹಿಂದೆ ಸಾಕಷ್ಟು ಜನ ಇದ್ದಾರೆ. ಹಿಮೋಫಿಲಿಯಾ ನಿಯಂತ್ರಣಕ್ಕೆ ಸರ್ಕಾರಗಳು ಒತ್ತು ಕೊಡಬೇಕು ಎಂದು ಅವರು ಮನವಿ ಮಾಡಿದರು.
ಸುರೇಶ್ ಹನಗವಾಡಿ ಅವರಿಗೆ ಈಗಾಗಲೇ ಕೇಂದ್ರ ಸರ್ಕಾರದ ಶ್ರೇಷ್ಠ ದಿವ್ಯಾಂಗಜನ (2024), ರಾಜ್ಯೋತ್ಸವ ಪ್ರಶಸ್ತಿ (2021) ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವಗಳಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ʻಕನ್ನಡದ ಜ್ಞಾನ ದಾಸೋಹಿʼ ಮಂಡ್ಯದ ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಗರಿ
45 ವರ್ಷಗಳಿಂದ ಅಧ್ಯಯನ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಡಾ.ಸುರೇಶ್ ಹನಗವಾಡಿ ರವರು ಮೂಲತಃ ವೈದ್ಯರಾಗಿದ್ದು ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಫೆಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ.
ಡಾ.ಸುರೇಶ್ ರವರು ಅತಿ ವಿರಳ, ದುಬಾರಿ ವೆಚ್ಚದ ಹಿಮೋಫಿಲಿಯಾ ನ್ಯೂನತೆ ಹೊಂದಿದ್ದು ಈ ಕಾಯಿಲೆ ಬಗ್ಗೆ ಸತತ 45 ವರ್ಷಗಳಿಂದ ಸಾಕಷ್ಟು ಅಧ್ಯಯನ ಮಾಡಿ ದೇಶ ವಿದೇಶಗಳ ಸುತ್ತಾಟ ಮಾಡಿ ತಮ್ಮ ಹಿಮೋಫಿಲಿಯಾ ಸಮುದಾಯದವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಸದರಿ ನ್ಯೂನತೆ ಬಗ್ಗೆ ಜಾಗೃತಿ ಮೂಡಿಸಿ ಅತಿ ದುಬಾರಿ ವೆಚ್ಚದ ಹಿಮೋಫಿಲಿಯಾ ಚಿಕಿತ್ಸೆಯನ್ನು ಸರ್ಕಾರದಿಂದ ಉಚಿತವಾಗಿ ದೇಶಾದ್ಯಂತ ದೊರಕಲು ಕಾರಣಕರ್ತರಾಗಿದ್ದಾರೆ.
ದೇಶದಲ್ಲಿಯೇ ಹಿಮೋಫಿಲಿಯಾ, ತಲಸ್ಸೇಮಿಯಾ ಸೇರಿದಂತೆ ವಿರಳ ರಕ್ತಸ್ರಾವ ರೋಗಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಚಿಕಿತ್ಸಾ ಕೇಂದ್ರವನ್ನು ದಾವಣಗೆರೆ ನಗರದಲ್ಲಿ ಸ್ಥಾಪಿಸಿ ಅನ್ಯ ರಾಜ್ಯದ ರೋಗಿಗಳು ಒಳಗೊಂಡಂತೆ ಸಾವಿರಾರು ರೋಗಿಗಳಿಗೆ ಉತ್ಕೃಷ್ಟ ಗುಣಮಟ್ಟದ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಸಮಾಜ ಸೇವಕಿ ಡಾ. ಎಸ್.ಜಿ. ಸುಶೀಲಮ್ಮಗೆ ಪದ್ಮಶ್ರೀ ಪ್ರಶಸ್ತಿ
ಡಾ. ಸುರೇಶ್ ಹನಗವಾಡಿ ರವರ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದ ನಿಸ್ವಾರ್ಥ ಸೇವೆಗೆ ಈಗಾಗಲೇ ಹತ್ತಾರು ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳು ಸಂದಿವೆ. ಅಂಗವಿಕಲತೆಯನ್ನು ತಡೆಗಟ್ಟುವ ಕಾರ್ಯದಲ್ಲಿ ನಿರತರಾಗಿರುವ ಹನಗವಾಡಿಯವರಿಗೆ ಕಳೆದ ವರ್ಷ ಕೇಂದ್ರ ಸರ್ಕಾರದ 2024 ನೆ ಸಾಲಿನ ವಿಕಲಚೇತನರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.
2 ಬಾರಿ ಹಿಮೋಫಿಲಿಯಾ ಫೆಡರೇಷನ್ ಆಫ್ ಇಂಡಿಯಾ ದ ಅಧ್ಯಕ್ಷರಾಗಿ ದೇಶಾದ್ಯಂತ ಸಂಚರಿಸಿ ಹಿಮೋಫಿಲಿಯಾ ಬಾದಿತರ ಕಲ್ಯಾಣಕ್ಕಾಗಿ ಸರ್ಕಾರದಿಂದ ಹಲವು ಸೌಲಭ್ಯ ಕೊಡಿಸುವಲ್ಲಿ ಯಶಸ್ಸು ಕಂಡಿದ್ದಾರೆ ..ಪ್ರಸ್ತುತ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಅಧ್ಯಕ್ಷರಾಗಿ ರಾಜ್ಯದ ಹಿಮೋಫಿಲಿಯಾ ರೋಗಿಗಳ ಆರೈಕೆಯಲ್ಲಿ ತಲ್ಲಿನರಾಗಿದ್ದಾರೆ.


