ಬೆಂಗಳೂರು: ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರು ಆಯ್ಕೆಯಾಗಿದ್ದಾರೆ.
69 ವಯಸ್ಸಾಗಿರುವ ಡಾ.ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇದೀಗ ಇಂದು ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ (Dr C.N Manjunath) ಅವಧಿ ಮುಕ್ತಾಯ ಹಿನ್ನೆಲೆ ಅವರ ಸ್ಥಾನಕ್ಕೆ ಡಾ.ರವೀಂದ್ರನಾಥ್ (Dr Ravindranath) ಅವರನ್ನು ನೇಮಿಸಲಾಗಿದೆ.
ಡಾ.ಸಿ.ಎನ್ ಮಂಜುನಾಥ್ (Dr CN Manjunath ಅವರ ಸೇವಾವಧಿ ಇಂದಿಗೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಮಂಗಳವಾರ ಜಯದೇವ ಆಸ್ಪತ್ರೆ (Jayadeva Hospital) ಸಿಬ್ಬಂದಿ ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಆರತಿ ಬೆಳಗಿ ಗೌರವಿಸಿದ್ದರು.
ಬೀಳ್ಕೊಡುಗೆ ಸಮಾರಂಭದಲ್ಲಿ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದ್ದ ಡಾ.ಸಿ.ಎನ್ ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300 ಹಾಸಿಗೆ ಇತ್ತು, ಈಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ ತಮ್ಮ ನೆನಪುಗಳನ್ನ ಹಂಚಿಕೊಂಡಿದ್ದರು.