ಚಿಕ್ಕಮಗಳೂರು: ಅನುಮಾನಸ್ಪದವಾಗಿ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಗೋವಿಂದರಾಜು ಎಂಬುವರ ಮಗಳಾಗಿರುವ ಶೃತಿ ಮೃತಪಟ್ಟ ಗೃಹಿಣಿ. ಕಳೆದ ವರ್ಷ ಏಪ್ರಿಲ್‍ನಲ್ಲಿ ಚಿಕ್ಕಮಗಳೂರು ಎಸ್‍ಪಿ ಕಚೇರಿಯಲ್ಲಿ ಉದ್ಯೋಗಿಯಾಗಿರುವ ವಸಂತಕುಮಾರ್ ಎಂಬುವರ ಜೊತೆ ಮದುವೆಯಾಗಿತ್ತು.
ಮದುವೆ ಸಂದರ್ಭದಲ್ಲಿ ಶೃತಿ ಮನೆಯವರು 100 ಗ್ರಾಂ ಚಿನ್ನ, ಒಂದು ಬೈಕ್ ಹಾಗೂ ಒಂದು ಲಕ್ಷ ರೂ. ನಗದು ಹಣ ನೀಡಿದ್ದರು. ಆದರೆ ಮದುವೆ ನಂತರ ವಸಂತ ಕುಮಾರ್ ಹಣದ ದುರಾಸೆಯಿಂದ 5 ಲಕ್ಷ ರೂಪಾಯಿ ತರುವಂತೆ ದಿನವೂ ಪೀಡಿಸುತ್ತಿದ್ದನು ಎನ್ನುವ ಆರೋಪ ಕೇಳಿಬಂದಿದೆ.
ವಸಂತಕುಮಾರ್ ಇನ್ನೊಬ್ಬ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ನನ್ನ ಮಗಳು ಪ್ರಶ್ನೆ ಮಾಡಿದ್ದಾಳೆ. ಇದರಿಂದಾಗಿ ಆಕ್ರೋಶಗೊಂಡ ವಸಂತ್ ಕುಮಾರ್ ನನ್ನ ಮಗಳನ್ನು ಹೊಡೆದು ಕೊಂದಿದ್ದಾನೆ. ನಂತರ ತಾನೇ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕುರಿತು ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ಕೊಡಿಸಿ ಎಂದು ಪೋಷಕರು ಬೇಡಿಕೊಳ್ಳುತ್ತಿದ್ದಾರೆ.
ಈ ಪ್ರಕರಣ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ವಸಂತಕುಮಾರ್ ಅನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಪೋಷಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.