-ಕಾಣೆಯಾದ ಅಮ್ಮ, ಅಣ್ಣನ ಹುಡುಕಾಟದಲ್ಲಿ ಗರ್ಭಿಣಿ
ಬೆಂಗಳೂರು: ಪತಿಯೋರ್ವ ವರದಕ್ಷಿಣೆ ಆಸೆಗಾಗಿ ಪತ್ನಿಗೆ ಕಿರುಕುಳ ನೀಡಿದಲ್ಲದೇ, ಪ್ರಶ್ನಿಸಿದ ಅತ್ತೆಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ
ಬೆಂಗಳೂರಿನ ಮಡಿವಾಳ ನಿವಾಸಿ ವರಲಕ್ಷ್ಮಿ ವರ್ಷದ ಹಿಂದೆ ಕೆಜಿಎಫ್‍ನ ಉರ್ಗಿನ್ಪೇಟೆಯ ಮುರಳಿ ಬಾಬು ಎಂಬಾತನನ್ನು ಮದುವೆ ಆಗಿದ್ದರು. ಗರ್ಭಿಣಿ ಪತ್ನಿಗೆ ಪತಿ ಮುರಳಿ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡಿದ್ದಾನೆ. ಪತಿಯ ಈ ಕೆಲಸಕ್ಕೆ ಅತ್ತೆ ವಸಂತಮ್ಮ, ಬಾವ ರಾಜೇಶ್ ಹಾಗೂ ಬಾವನ ಹೆಂಡತಿ ರಾಜೇಶ್ವರಿ ಎಲ್ಲರೂ ಸಾಥ್ ನೀಡಿ ವರಲಕ್ಷ್ಮಿಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ.
ವರಲಕ್ಷ್ಮಿ ತುಂಬು ಗರ್ಭಿಣಿಯಾಗಿದ್ರು, ಅದನ್ನ ಲೆಕ್ಕಿಸದೆ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೌರ್ಜನ್ಯದ ವಿಡಿಯೋ ಮಾಡಿರುವ ವರಲಕ್ಷ್ಮೀ ತಾಯಿಗೆ ಕಳಿಸಿದ್ದಾರೆ. ವರಲಕ್ಷ್ಮಿ ಮೇಲಿನ ಹಲ್ಲೆಯ ವಿಡಿಯೋ ನೋಡಿದ ಬಳಿಕ ಪುತ್ರನೊಂದಿಗೆ ತಾಯಿ ಮಗಳ ಮನೆಗೆ ಬಂದಿದ್ದಾರೆ. ಈ ವೇಳೆ ಲಾಂಗಿನಿಂದ ಹಲ್ಲೆ ಮಾಡಲು ನನ್ನ ಗಂಡ ಹಾಗೂ ಭಾವ ರಾಜೇಶ್ ಮುಂದಾಗಿದ್ದರು. ನಾನೇ ನನ್ನ ಗಂಡನನ್ನ ತಡದೇ, ಆಗ ನನ್ನ ಅಮ್ಮ ಹಾಗೂ ಅಣ್ಣ ತಪ್ಪಿಸಿಕೊಂಡು ಹೋದರು. ಅವತ್ತಿನಿಂದ ಅಮ್ಮ ಮತ್ತು ಅಣ್ಣ ಕಾಣಿಸುತ್ತಿಲ್ಲ. ಎಲ್ಲಿಗೆ ಹೋದ್ರು ಏನ್ ಆಗಿದೆ ಅಂತನೂ ಗೊತ್ತಿಲ್ಲ ಎಂದು ವರಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ.
ಗಂಡ ಹಾಗೂ ಆತನ ಮನೆಯವರ ಕಿರುಕುಳದ ಬಗ್ಗೆ ಕೆಜಿಎಫ್‍ನಲ್ಲಿ ಹಾಗೂ ಮಡಿವಾಳ ಠಾಣೆಯಲ್ಲಿ ದೂರು ನೀಡಲು ಹೋದರೆ ಪೊಲೀಸರು ಸಹ ವರಲಕ್ಷ್ಮಿ ನೆರವಿಗೆ ಬಂದಿಲ್ಲವಂತೆ. ಬದಲಿಗೆ ಪತಿ ಮುರಳಿ ಬಾಬು ತನ್ನ ಪತ್ನಿ ಹಾಗೂ ಮನೆಯವರ ಮೇಲೆ ಹಲ್ಲೆ ಆರೋಪ ಮಾಡಿ ಕೆಜಿಎಫ್‍ನ ರಾಬೀಸನ್ ಠಾಣೆಗೆ ದೂರು ನೀಡಿದ್ದಾನೆ. ಈ ಘಟನೆಯಿಂದ ತುಂಬು ಗರ್ಭಿಣಿ ವರಲಕ್ಷ್ಮಿ ಬೀದಿಗೆ ಬಂದಿದ್ದಾರೆ.