ಬೆಂಗಳೂರು: ಎಸ್‍ಎಸ್‍ಎಲ್‍ಸಿ ಬೋರ್ಡ್ ತಂತ್ರಜ್ಞಾನವನ್ನು ಅಳವಡಿಕೊಂಡು ಹೊಸ ಹೊಸ ಕಾರ್ಯಕ್ರಮ ಜಾರಿಗೆ ತರುತ್ತಿದೆ. ಅಂಕಪಟ್ಟಿಗಳು ಮಕ್ಕಳಿಗೆ ಸುಲಭವಾಗಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಡಿಜಿ ಲಾಕರ್ನಲ್ಲಿ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಸಿಗುವ ವ್ಯವಸ್ಥೆ ಮಾಡಿದೆ.
ಕಳೆದ ವರ್ಷದಿಂದ ಡಿಜಿ ಲಾಕರ್ನಲ್ಲಿ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಅಪ್ ಲೋಡ್ ಮಾಡಲಾಗ್ತಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೋರ್ಡ್ 2003 ರಿಂದ 2019 ವರೆಗಿನ ಉತ್ತೀರ್ಣರಾದ ಎಲ್ಲಾ ಅಂಕಪಟ್ಟಿಗಳನ್ನ ಡಿಜಿ ಲಾಕರ್ಗೆ ಅಪ್ ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಬಳಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ
ಕಳೆದ ವರ್ಷ ಕೇವಲ 2019 ಅವಧಿಯ ಅಂಕಪಟ್ಟಿಗಳನ್ನು ಮಾತ್ರ ಅಪ್ ಲೋಡ್ ಮಾಡಲಾಗಿತ್ತು. ಹಳೆಯ ವರ್ಷಗಳ ಅಂಕಪಟ್ಟಿ ಅಪ್ ಲೋಡ್ ಮಾಡುವಂತೆ ಮನವಿಗಳು ಬಂದಿದ್ದವು. ಹೀಗಾಗಿ 2003 ರಿಂದ 2019 ವರೆಗಿನ ಸುಮಾರು 1 ಕೋಟಿ 12 ಲಕ್ಷ ಅಂಕಪಟ್ಟಿಗಳನ್ನ ಡಿಜಿ ಲಾಕರ್ಗೆ ಬೋರ್ಡ್ ಅಪ್ ಲೋಡ್ ಮಾಡಿದೆ.
ಕೇವಲ ಅಂಕ ಪಟ್ಟಿ ಮಾತ್ರವಲ್ಲ ವಲಸೆ ಪ್ರಮಾಣ ಪತ್ರವೂ ಕೂಡಾ ಇನ್ನು ಮುಂದೆ ಆನ್‍ಲೈನ್‍ನಲ್ಲಿ ಸಿಗಲಿದೆ. ಇಷ್ಟು ದಿನ ವಲಸೆ ಪ್ರಮಾಣ ಪತ್ರ(ಮೈಗ್ರೇಷನ್ ಸರ್ಟಿಫಿಕೇಟ್) ವನ್ನ ಬೋರ್ಡ್ ಗೆ ಹೋಗಿ ಅರ್ಜಿ ಹಾಕಿ ಪಡೆಯಬೇಕಿತ್ತು. ಇದರಿಂದ ಮಕ್ಕಳು, ಪೋಷಕರಿಗೆ ತೊಂದರೆ ಆಗುತಿತ್ತು. ಈ ಸಮಸ್ಯೆ ನಿವಾರಣೆ ಮಾಡಲು ಇನ್ನು ಮುಂದೆ ವಲಸೆ ಪ್ರಮಾಣ ಪತ್ರ ಪಡೆಯಲು ಆನ್‍ಲೈನ್‍ನಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಎಸ್‍ಎಸ್‍ಎಲ್‍ಸಿ ಬೋರ್ಡ್ ಕಲ್ಪಿಸಿದೆ.
ಏನಿದು ಡಿಜಿ ಲಾಕರ್?
ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 1 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ವಿಮೆ ಹಾಗೂ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.
ಡಿಜಿ ಲಾಕರ್ ಪಡೆಯುವುದು ಹೇಗೆ?
ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಡಿಜಿಲಾಕರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಬೇಕು, ನಂತರ ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.