– 32ರ ಪೈಕಿ 16 ಕ್ರಸ್ಟ್‌ಗೇಟ್ ಮಾತ್ರ ಪೂರ್ಣ
– ಸರ್ಕಾರದ ವಿರುದ್ಧ ರೈತರ ಆಕ್ರೋಶ
ಬಳ್ಳಾರಿ: ಕಲ್ಯಾಣ ಕರ್ನಾಟಕದ (Kalyana Karnataka) ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ (TB Dam) ಕ್ರಸ್ಟ್‌ಗೇಟ್ (Crest Gate) ಅಳವಡಿಕೆ ಈ ಬೇಸಿಗೆಯಲ್ಲಿ ನಡೆಯುವುದು ಅನುಮಾನ ಎಂಬ ಮಾತು ಕೇಳಿ ಬಂದಿದೆ.
19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಬಳಿಕ ಜಲಾಶಯದ ಎಲ್ಲಾ ಗೇಟ್‌ಗಳನ್ನು ಕೂಡಲೇ ಬದಲಾಯಿಸಬೇಕುಎಂದು ತಜ್ಞರು ವರದಿ ನೀಡಿದ್ದರು. ವರದಿ ಕೊಟ್ಟು ವರ್ಷ ಕಳೆದರೂ ಇದುವರೆಗೂ ಗೇಟ್ ಬದಲಾಯಿಸಲು ಸಾಧ್ಯವಾಗಿಲ್ಲ. 32 ಗೇಟ್ ಪೈಕಿ ಇಲ್ಲಿಯವರೆಗೆ ಕೇವಲ 16 ಗೇಟ್ ಮಾತ್ರ ತಯಾರಾಗಿದ್ದು, ಗೇಟ್ ಸಿದ್ದತೆ ಕಾರ್ಯ ಸಾಕಷ್ಟು ವಿಳಂಬವಾಗುತ್ತಿದೆ.
ಕಲ್ಯಾಣ ಕರ್ನಾಟಕದ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಒಟ್ಟು 8 ಜಿಲ್ಲೆಗಳ ಜೀವನಾಡಿ ಈ ತುಂಗಭದ್ರಾ ಜಲಾಶಯ. ಇದೇ ಜಲಾಶಯದ ನೀರಿನಿಂದ 16 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಭತ್ತ ಬೆಳೆಯುತ್ತಾರೆ. ಇದೀಗ ಆ ಎಲ್ಲಾ ರೈತರು (Farmers) ಅಕ್ಷರಶಃ ಆತಂಕಕ್ಕೆ ಒಳಗಾಗಿದ್ದಾರೆ. ತುಂಗಭದ್ರಾ ಜಲಾಶಯದ 19 ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿ ಒಂದು ವರ್ಷ 6 ತಿಂಗಳಾಗಿದ್ರೂ ಅದಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಇದನ್ನೂ ಓದಿ: ಗಗನಕ್ಕೇರಿದ ತರಕಾರಿಗಳ ಬೆಲೆ – ಯಾವುದಕ್ಕೆ ಎಷ್ಟು?

ಹೊಸ ಗೇಟ್‌ಗಳನ್ನು ತಯಾರಿಸಲು ಗುಜರಾತ್ ಮೂಲದ ಅಹಮದಬಾದ್‌ನ ಹಾರ್ಡ್‌ವೇರ್ ಟೂಲ್ಸ್ ಆಂಡ್ ಮಷಿನರಿ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಟೆಂಡರ್ ಹಂಚಿಕೆ ಮಾಡಲಾಗಿತ್ತು. 32 ಗೇಟುಗಳ ಬದಲಾವಣೆ ಮಾಡಲು ಒಟ್ಟು 53 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ಬಿಡ್ ಮಾಡಿದ ಕಂಪನಿ ಕಡಿಮೆ ಬೆಲೆಗೆ ಟೆಂಡರ್ ಹಾಕಿದ್ದರಿಂದ ಯೋಜನಾ ಮೊತ್ತ 36 ಕೋಟಿ ರೂ.ಗೆ ತಗ್ಗಿದೆ. ಇಲ್ಲಿಯವರೆಗೆ 16 ಗೇಟುಗಳು ಮಾತ್ರ ತಯಾರಾಗಿರುವ ಕಾರಣ ಮುಂದಿನ ವರ್ಷವೂ ಎರಡನೇ ಬೆಳೆಗೆ ನೀರು ಸಿಗುತ್ತಾ? ಸಿಗುವುದಿಲ್ಲವೋ ಎಂಬ ಆತಂಕದಲ್ಲಿ ತುಂಗಭದ್ರಾ ಜಲಾನಯನ ಪ್ರದೇಶದ ರೈತರಿದ್ದಾರೆ. ಇದನ್ನೂ ಓದಿ: ರಾಜ್ಯದ ಐದು ಜಿಲ್ಲೆಗಳಲ್ಲಿ ಅಂತರ್ಜಲದ ವಿಪರೀತ ಬಳಕೆ

