ಮಡಿಕೇರಿ: ನಡುರಸ್ತೆಯಲ್ಲಿ ತಾಯಿ-ಮಗಳನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆಯ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದೊಡ್ಡಮಲ್ತೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
45 ವರ್ಷದ ತಾಯಿ ಕವಿತಾ ಹಾಗೂ 16 ವರ್ಷದ ಜಗಶ್ರೀ ಕೊಲೆಯಾದ ದುರ್ದೈವಿಗಳು. 10 ವರ್ಷದ ಹಿಂದೆ ಪತಿಯನ್ನ ಕಳೆದುಕೊಂಡಿದ್ದ ಕವಿತಾ, ಧೈರ್ಯಗುಂದದೆ ತಂದೆಯಿಲ್ಲದ ಕೊರಗು ಇಬ್ಬರು ಮಕ್ಕಳಿಗೂ ಬರಬಾರದು ಎಂಬ ರೀತಿಯಲ್ಲಿ ಸಾಕುತ್ತಿದ್ದರು. ತಮ್ಮ ಪಾಲಿಗೆ ಬಂದಿದ್ದ ಸುಮಾರು 8 ಎಕರೆ ಜಾಗದಲ್ಲಿ ಕಾಫಿ ಹಾಕಿ ಜೀವನೋಪಾಯ ಮಾರ್ಗವನ್ನು ಕಂಡುಕೊಂಡಿದ್ದರು.
ಮಂಗಳವಾರ ತಾಯಿ-ಮಗಳು ತೋಟದತ್ತ ತೆರಳಿದ್ದರು. ಸಂಜೆಯಾದರೂ ತೋಟಕ್ಕೆ ಹೋದ ಅಕ್ಕ-ಅಮ್ಮ ಬಾರದಿಂದ ಗಾಬರಿಗೊಂಡ ಪುತ್ರ ಮದನ್ ರಾಜ್ ಅವರನ್ನು ಕರೆದುಕೊಂಡು ಬರಲು ಹೋಗಿದ್ದಾನೆ. ಈ ವೇಳೆ ತೋಟದ ಮಾರ್ಗ ಮಧ್ಯೆಯೇ ಅಕ್ಕ-ಅಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ಕಂಡ ಮದನ್, ಭಯಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ. ಗ್ರಾಮಸ್ಥರು ಬರೋವಷ್ಟರಲ್ಲಿ ತಾಯಿ-ಮಗಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಸೋದರ ಮತ್ಸರ: ಪತಿ ಕಳೆದುಕೊಂಡ ಬಳಿಕ ಕವಿತಾ ತಮ್ಮ ಪಾಲಿಗೆ ಬಂದ ಜಮೀನಿನಲ್ಲಿ ಕಾಫಿ ತೋಟ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಈ ನೆಮ್ಮದಿಯ ಜೀವನ ಕವಿತಾರ ಪತಿ ಸೋದರನ ಕಣ್ಣು ಕೆಂಪು ಮಾಡಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ವ್ಯಕ್ತಿ ಕವಿತಾರ ತೋಟದ ಪಕ್ಕದಲ್ಲಿಯೇ ಮನೆಯ ನಿರ್ಮಾಣದ ಕೆಲಸ ಆರಂಭಿಸಿದ್ದಾರೆ. ಓಡಾಡಲು ದಾರಿ ಬಿಟ್ಟುಕೊಡುವಂತೆ ಪಟ್ಟು ಹಿಡಿದಿದ್ದಾರಂತೆ. ಈ ಪ್ರಕರಣ ಸದ್ಯ ಕೋರ್ಟ್ ನಲ್ಲಿದೆ. ಇದೇ ವಿಚಾರವಾಗಿ ಹಲವು ಬಾರಿ ಎರಡು ಕುಟುಂಬದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಘಟನಾ ಸ್ಥಳಕ್ಕೆ ಸೋಮವಾರ ಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.