ಲಕ್ನೋ: ಉತ್ತರ ಪ್ರದೇಶದಲ್ಲಿ ಗೋರಖ್‍ಪುರದ ಹಿರಿಯ ಬಿಜೆಪಿ ಶಾಸಕ ಡಾ. ರಾಧಾ ಮೋಹನ್ ಅಗರ್‍ವಾಲ್ ಮಹಿಳಾ ಪೊಲೀಸ್ ಅಧಿಕಾರಿಗೆ ಕಣ್ಣೀರು ಹಾಕಿಸಿದ್ದಾರೆ.
ಇಲ್ಲಿನ ಕೋಯಿಲ್ವಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಮಹಿಳೆಯರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾನಿರತ ಮಹಿಳೆಯರು ಕಲ್ಲು ತೂರಾಟ ನಡೆಸಿದ ಕಾರಣ ಲಾಠಿ ಚಾರ್ಜ್ ಮಾಡಿದ್ದು, ಕೆಲವು ಮಹಿಳೆಯರು ಗಾಯಗೊಂಡರು ಎಂದು ಪೊಲೀಸರು ಹೇಳಿದ್ದಾರೆ.
Advertisement
ನಂತರ ಸ್ಥಳಕ್ಕೆ ಆಗಮಿಸಿದ ಹಿರಿಯ ಶಾಸಕ ಅಗರ್‍ವಾಲ್, ಸದ್ಯ ಗೋರಖ್‍ಪುರ್‍ನಲ್ಲಿ ತರಬೇತಿಯಲ್ಲಿರುವ 2013ರ ಬ್ಯಾಚ್‍ನ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರೊಂದಿಗೆ ವಾದಕ್ಕೆ ಇಳಿದರು. ಬೆರಳು ತೋರಿಸಿ ಎಚ್ಚರಿಕೆ ನೀಡಿದರು. ನಾನು ನಿನ್ನೊಂದಿಗೆ ಮಾತಾಡ್ತಿಲ್ಲ, ನನಗೆ ಏನೂ ಹೇಳಬೇಡ, ನೀನು ಸುಮ್ಮನಿರು, ನಿನ್ನ ಮಿತಿ ಮೀರಬೇಡ ಅಂತಾ ಅವಾಜ್ ಹಾಕಿದ್ರು.
Advertisement
ಆಗ ಚಾರು ನಿಗಮ್, ನಾನು ಇಲ್ಲಿನ ಅಧಿಕಾರಿ. ನಾನು ಏನು ಮಾಡ್ತಿದ್ದೀನಿ ಎಂಬುದು ನನಗೆ ಗೊತ್ತು ಎಂದಿದ್ದಾರೆ. ನಂತರ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದಿದ್ದು, ಈ ವೇಳೆ ಚಾರು ನಿಗಮ್ ಕಣ್ಣೀರು ಹಾಕಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ರಾಧಾ ಮೋಹನ್, ನಾನು ಅಧಿಕಾರಿಯೊಂದಿಗೆ ಕೆಟ್ಟದಾಗಿ ನಡೆದಕೊಂಡಿಲ್ಲ ಎಂದಿದ್ದಾರೆ. ನಾವು ಮದ್ಯದಂಗಡಿಗಳ ಚಟುವಟಿಕೆಯ ವಿರುದ್ಧ ಇದ್ದೇವೆ. ಮಹಿಳೆಯರು ಶಾಂತಿಯುತವಾಗಿ ಮದ್ಯದಂಗಡಿಗಳ ವರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಮಹಿಳಾ ಪೊಲೀಸ್ ಅಧಿಕಾರಿ ಬಲವಂತವಾಗಿ ಅವರನ್ನ ಚದುರಿಸಿದ್ರು. 80 ವರ್ಷದ ವೃದ್ಧೆಯೊಬ್ಬರನ್ನು ಎಳೆದಾಡಿ ಹೊಡೆದಿದ್ದಾರೆ. ಇದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮದ್ಯ ಮಾಫಿಯಾದವರೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ. 15 ದಿನಗಳ ಹಿಂದೆ ಮುಚ್ಚಲಾಗಿದ್ದ ಮದ್ಯದಂಗಡಿಗಳು ಈಗ ಇದ್ದಕ್ಕಿದಂತೆ ಮತ್ತೆ ಕಾರ್ಯಾರಂಭ ಮಾಡಿವೆ ಎಂದು ಅಗರ್‍ವಾಲ್ ಆರೋಪಿಸಿದ್ದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.