ಬೆಂಗಳೂರು: ಸಣ್ಣಪುಟ್ಟ ಕಾಯಿಲೆ ಇದ್ದರೆ ಬರಲೇಬೇಡಿ, ಎಮರ್ಜೆನ್ಸಿ ಇದ್ದವರು ಮಾತ್ರ ಕಿದ್ವಾಯಿ ಆಸ್ಪತ್ರೆಗೆ ಬನ್ನಿ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ. ಸಿ ರಾಮಚಂದ್ರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿನಾಕಾರಣ ಮನೆಯಿಂದ ಹೊರ ಬರಬೇಡಿ. ಸರ್ಕಾರದ ಆದೇಶಗಳನ್ನ ಪಾಲನೆ ಮಾಡಿ. ಉಸಿರಾಟ, ಹೊಟ್ಟೆ ಉಬ್ಬರ, ತುರ್ತು ಆರೋಗ್ಯ ಚಿಕಿತ್ಸೆ ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ. ವಿನಾಕಾರಣ ನೀವು ಹೊರಗೆ ಬಂದು, ಇತರರಿಗೂ ತೊಂದರೆ ಕೊಡಬೇಡಿ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಹಕರಿಸಿ ಎಂದು ಸಂಸ್ಥೆಯ ನಿರ್ದೇಶಕರು ಸಾರ್ವಜನಿಕರಲ್ಲಿ ಕೋರಿಕೊಂಡಿದ್ದಾರೆ.
ಈ ಹಿಂದೆ ಗುರುವಾರ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದಾಗ, ಓಪಿಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ, ತುರ್ತು ಸೇವೆ ಮಾತ್ರ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದರು.
ಕಿಮೋಥೆರಪಿ ಮತ್ತು ರೇಡಿಯೋ ತೆರಪಿ ಮಾಡಿಸಿಕೊಳ್ಳುವ ರೋಗಿಗಳು ಕೆಎಂಸಿಗೆ ಯಾವುದೇ ಕಾರಣಕ್ಕೆ ಕಾಲಿಡಬಾರದು. ಅವರು ನೇರವಾಗಿ ಶಿರಡಿ ಸಾಯಿಬಾಬಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಗರ್ಭಿಣಿ ಸ್ತ್ರೀಯರು ಎಮರ್ಜೆನ್ಸಿ ಮತ್ತು ಒಪಿಡಿ ಕಟ್ಟಡದ ಬಳಿ ಸುಳಿದಾಡುತ್ತಿಲ್ಲ, ಅವರು ನೇರವಾಗಿ ಮಹಿಳಾ ಮತ್ತು ಮಕ್ಕಳ ಘಟಕಕ್ಕೆ ತೆರಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಯಾವುದೇ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯನ್ನು ಪ್ರವೇಶ ಮಾಡುವವರು ಹೊರಭಾಗದಲ್ಲಿ ಸಂಪೂರ್ಣ ತಪಾಸಣೆಗೆ ಒಳಗಾಗಬೇಕು. ರೋಗದ ಯಾವುದೇ ಲಕ್ಷಣಗಳು ಇದ್ದಲ್ಲಿ ಅಂತಹ ವ್ಯಕ್ತಿಯನ್ನು ಮಣಿಪಾಲ ಕೆಎಂಸಿಯ ಒಳಗೆ ವೈದ್ಯರು ಮತ್ತು ಸಿಬ್ಬಂದಿಗಳು ಬಿಟ್ಟುಕೊಳ್ಳುವುದಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 10 ಮಂದಿ ಕೊರೊನಾ ಸೋಂಕಿತರಿಗೆ ಸಂಪೂರ್ಣ ಚಿಕಿತ್ಸೆ ಕೊಡುವಂತಹ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿತ್ತು.