ಜಗತ್ತಿನಲ್ಲಿ ಅತ್ಯಂತ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ. ಆದರೆ ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ವಿಶಿಷ್ಟವಾದ ಗುಣವಿರುತ್ತದೆ. ಅದರಂತೆ ಪ್ರತಿ ಜೀವಿಯು ತನ್ನ ಬುದ್ಧಿವಂತಿಕೆಯನ್ನು ವಿಭಿನ್ನವಾಗಿ ಬಳಸಿಕೊಳ್ಳುತ್ತವೆ. ತನ್ನ ಸ್ವಾರ್ಥಕ್ಕಾಗಲಿ ಅಥವಾ ಇನ್ನೊಬ್ಬರ ಸಹಾಯಕ್ಕಾಗಲಿ ಆ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತದೆ.
ಭೂಮಿಯ ಮೇಲಿರುವ ಎಲ್ಲಾ ಜೀವಿಗಳಂತೆ ಜಲಚರ ಜೀವಿಗಳು ಕೂಡ ವಿಭಿನ್ನ ಬುದ್ಧಿವಂತಿಕೆಯನ್ನು ಹೊಂದಿರುತ್ತವೆ. ಅದರಂತೆ ಡಾಲ್ಫಿನ್ ಕೂಡ ವಿಭಿನ್ನ ಬುದ್ಧಿವಂತಿಕೆ ಹೊಂದಿದೆ. ಏನಿದು? ಡಾಲ್ಫಿನ್ ಹೊಂದಿರುವ ಆ ಬುದ್ಧಿವಂತಿಕೆ ಏನು? ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಡಾಲ್ಫಿನ್ ಮೀನುಗಾರಿಕೆಗೆ ಸಹಾಯ ಮಾಡುತ್ತದೆ. ಹೌದು, ಸಮುದ್ರ ತೀರದಲ್ಲಿ ಮೀನುಗಾರರಿಗೆ ಮೀನು ಹಿಡಿಯಲು ಡಾಲ್ಫಿನ್ ಸಹಾಯ ಮಾಡುತ್ತದೆ. ಕೇರಳದ ಕೊಲ್ಲಂನ ಅಷ್ಟಮುಡಿ ಸರೋವರದಲ್ಲಿ ಡಾಲ್ಫಿನ್ ಗಳು ಮೀನುಗಾರಿಕೆಗೆ ಸಹಾಯ ಮಾಡುತ್ತವೆ. ಡಾಲ್ಫಿನ್‌ನ ಈ ನಡವಳಿಕೆಯ ಅಧ್ಯಯನಕ್ಕಾಗಿ ವಿಜ್ಞಾನಿಗಳು ಸಂಶೋಧನೆಯನ್ನು ಕೈಗೊಂಡಿದ್ದಾರೆ.
ಮೀನುಗಾರಿಕೆಗೆ ಡಾಲ್ಫಿನ್ ಹೇಗೆ ಸಹಾಯ ಮಾಡುತ್ತದೆ?
2012ರಲ್ಲಿ ಕೇರಳ ವಿಶ್ವವಿದ್ಯಾಲಯದ ಜಲಚರ ಜೀವಶಾಸ್ತ್ರ ಮತ್ತು ಮೀನುಗಾರಿಕಾ ವಿಭಾಗದ ಪ್ರೊಫೆಸರ್ ಎ. ಬಿಜು ಕುಮಾರ್, ಆರ್ .ಸ್ಮೃತಿ ಮತ್ತು ಕೆ ಸದಾಶಿವಂ ಅವರು ಅಧ್ಯಯನ ಮಾಡಿ, ಮೀನುಗಾರಿಕೆಗೆ ಡಾಲ್ಫಿನ್ ಸಹಾಯ ಮಾಡುವ ಕುರಿತು ವರದಿ ನೀಡಿದ್ದಾರೆ. ಇನ್ನು ಡಾಲ್ಫಿನ್‌ಗಳು ಸಹಾಯ ಮಾಡುವ ರೀತಿಯನ್ನು ಮೀನುಗಾರರು ಲಾಭ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಅವರ ಮೀನುಗಾರಿಕೆಗೆ ಸಹಕಾರಿಯಾಗುತ್ತದೆ
ಇನ್ನು ಡಾಲ್ಫಿನ್‌ಗಳು ತಮ್ಮ ಆಹಾರದ ಆಸೆಗಾಗಿ ದಡಕ್ಕೆ ಬರುತ್ತವೆ. ಸಾಮಾನ್ಯವಾಗಿ ಡಾಲ್ಫಿನ್‌ಗಳು ಮೀನುಗಳನ್ನು ತಮ್ಮ ಆಹಾರದ ಭಾಗವಾಗಿ ಸೇವಿಸುತ್ತವೆ. ಅದರಂತೆ ಮಲಿಕ್ ಎಂಬ ಮೀನನ್ನು ಡಾಲ್ಫಿನ್‌ಗಳು ಹೆಚ್ಚಾಗಿ ತಿನ್ನಲು ಬಯಸುತ್ತವೆ. ಹೀಗಿರುವಾಗ ಡಾಲ್ಫಿನ್ ಮೀನುಗಳಿಗಾಗಿ ದಡಕ್ಕೆ ಬಂದಾಗ ಅಲೆಗಳು ವೇಗದಲ್ಲಿ ಚಲಿಸುತ್ತವೆ. ಈ ಸಮಯದಲ್ಲಿ ಮೀನುಗಳು ಡಾಲ್ಫಿನ್‌ನಿಂದ ತಪ್ಪಿಸಿಕೊಳ್ಳಲು ದಡಕ್ಕೆ ಬರುತ್ತವೆ. ಇದರ ಲಾಭ ಪಡೆದುಕೊಂಡು ಮೀನುಗಾರರು ಬಲೇ ಬೀಸುತ್ತಾರೆ. ಇದರಿಂದ ಮೀನುಗಾರಿಕೆಗೆ ಲಾಭವಾಗುತ್ತದೆ. ಜೊತೆಗೆ ಡಾಲ್ಫಿನ್‌ಗಳಿಗೂ ಕೂಡ ಆಹಾರ ದೊರೆಯುತ್ತದೆ.
ಸುಮಾರು 15 ವರ್ಷಗಳ ಹಿಂದೆ ಡಾಲ್ಫಿನ್‌ಗಳ ವರದಿಯೊಂದು ಕಂಡುಬಂದಿದೆ. 1991ರಲ್ಲಿ ಬ್ರೆಜಿಲ್ ಮತ್ತು 1997ರಲ್ಲಿ ಮಯನ್ಮಾರ್ನಲ್ಲಿ ಮೊದಲ ಬಾರಿಗೆ ಡಾಲ್ಫಿನ್‌ಗಳು ಮೀನುಗಾರಿಕೆಗೆ ಸಹಾಯ ಮಾಡಿದವು ಎಂದು ವರದಿಯಾಗಿದೆ. ಬ್ರೆಜಿಲ್‌ನ ಕರಾವಳಿ ತೀರದಲ್ಲಿ ಡಾಲ್ಫಿನ್‌ಗಳು ಮೀನುಗಾರರಿಗೆ ಮೀನು ಹಿಡಿಯಲು ಸಹಾಯ ಮಾಡಿದ್ದವು. ಅದಲ್ಲದೆ ಡಾಲ್ಫಿನ್ ದಡಕ್ಕೆ ಬರುವಾಗ ಯಾವ ಸಮಯದಲ್ಲಿ ಬಲೆ ಬೀಸಬೇಕು ಎಂದು ಮೀನುಗಾರರಿಗೆ ಸಂಕೇತ ನೀಡುತ್ತದೆ.
ಸದ್ಯ ಈ ಸಂಬಂಧ ಅಮೆರಿಕದ ಓರೆಗಾನ್ ಸ್ಟೇಟ್ ಯುನಿವರ್ಸಿಟಿ, ಬ್ರೆಜಿಲ್‌ನ ಯುನಿವರ್ಸಿಡೇಡ್ ಫೆಡರಲ್ ಡಿ ಸಾಂತಾ ಕ್ಯಾಟರಿನಾ, ಆಸ್ಟ್ರೇಲಿಯಾದ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ, ಕೇರಳದ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ದಕ್ಷಿಣ ಫೌಂಡೇಶನ್ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಮಾನವರಿಗೆ ಜಲಚರ ಪ್ರಾಣಿಗಳು ಯಾವ ರೀತಿ ಸಹಾಯ ಮಾಡುತ್ತವೆ, ಅದರ ನಡವಳಿಕೆ ಹಾಗೂ ಅವುಗಳ ಪರಸ್ಪರ ಪ್ರಯೋಜನಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.
ಭಾರತದ ಪ್ರಮುಖ ಸಂಶೋಧಕರಾದ ಕುಮಾರ್ ಅವರ ಜೊತೆಗೆ ಮೌರಿಸಿಯೊ ಕ್ಯಾಂಟರ್ (ಒರೆಗಾನ್ ಸ್ಟೇಟ್ ಯೂನಿವರ್ಸಿಟಿ, USA) – ಪ್ರಮುಖ ಜಾಗತಿಕ ಸಂಶೋಧಕ, ಫ್ಯಾಬಿಯೊ ಜಾರ್ಜ್ ಡೌರಾ ಜಾರ್ಜ್ (ಯುನಿವರ್ಸಿಡೇಡ್ ಫೆಡರಲ್ ಡಿ ಸಾಂಟಾ ಕ್ಯಾಟರಿನ, ಬ್ರೆಜಿಲ್), ಡ್ಯಾಮಿಯನ್ ರೋಜರ್ ಫಾರೈನ್ (ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿ) ಮತ್ತು ದೀಪಾನಿ ಸುತಾರಿಯಾ (ಡಾಕ್ಷಿಣ ಫೌಂಡೇಶನ್, ಬೆಂಗಳೂರು) ಅಧ್ಯಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಧ್ಯಯನದಲ್ಲಿ ಈ ಡಾಲ್ಫಿನ್‌ಗಳು ಮೀನುಗಾರಿಕೆಗೆ ಸಹಾಯ ಮಾಡುವ ಫೋಟೋ, ವಿಡಿಯೋ ಹಾಗೂ ಡಾಲ್ಫಿನ್‌ಗಳ ನಡವಳಿಕೆ ಮತ್ತು ಮೀನುಗಾರರೊಂದಿಗೆ ವರ್ತನೆ ಬಗ್ಗೆ ತಿಳಿಸುತ್ತದೆ.
ಈ ಅಧ್ಯಯನ ಸಂದರ್ಭದಲ್ಲಿ ಡಾಲ್ಫಿನ್‌ಗಳ ವರ್ತನೆಯ ಅವಲೋಕನ ಮತ್ತು ಸ್ಥಳೀಯ ಮೀನುಗಾರರೊಂದಿಗೆ ಸಂದರ್ಶನ ವಿಧಾನಗಳನ್ನು ಬಳಸಲಾಗುತ್ತದೆ. ಡಾಲ್ಫಿನ್‌ಗಳ ಶಬ್ದಗಳು ಮತ್ತು ವರ್ತನೆಯನ್ನು ದಾಖಲಿಸಲು ಹೈಡ್ರೋಫೋನ್ ಗಳು ಮತ್ತು ಸೋನಾರ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಅವುಗಳ ಆಹಾರ, ಸಂತಾನೋತ್ಪತ್ತಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಡಾಲ್ಫಿನ್‌ಗಳು ಮತ್ತು ಮಾನವರ ನಡುವಿನ ಸಹಕಾರದ ಬಗ್ಗೆ ತಿಳುವಳಿಕೆ ಹೆಚ್ಚಿಸುವುದಲ್ಲದೆ, ಪರಿಸರ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಇನ್ನು ಕೇರಳದ ಕರಾವಳಿಯಲ್ಲಿ ಎಂಟು ಜಾತಿಯ ಡಾಲ್ಫಿನ್‌ಗಳಿದ್ದು, ಹಿಂಡುಗಳ ರೂಪದಲ್ಲಿ ಕಂಡುಬರುತ್ತವೆ. ಇನ್ನು ಹೆಚ್ಚಿನ ಪ್ರಭೇದಗಳು ಸಮುದ್ರದ ಆಳದಲ್ಲಿ ವಾಸಿಸುತ್ತವೆ. ಹಂಪ್‌ಬ್ಯಾಕ್ ಎಂಬ ಡಾಲ್ಫಿನ್ ಸಮುದ್ರದ ಮೇಲ್ಭಾಗದಲ್ಲಿ ವಾಸಿಸುತ್ತವೆ.



