Connect with us

Latest

ಬಾಗ್ದಾದಿ ಹತ್ಯೆಯಲ್ಲಿ ಪಾತ್ರ ವಹಿಸಿದ್ದ ಶ್ವಾನದ ವಿಶೇಷತೆ ಏನು? ಕಾರ್ಯಾಚರಣೆಗೆ ಈ ನಾಯಿಯನ್ನೇ ಬಳಸುತ್ತಾರೆ ಯಾಕೆ?

Published

on

ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಬೆಲ್ಜಿಯನ್ ಮಾಲಿನೊಯ್ಸ್ ತಳಿಯ ಕಾನನ್ ಹೆಸರಿನ ಹೆಣ್ಣು ಶ್ವಾನ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಶಹಬ್ಬಾಸ್’ ಎಂದು ಬೆನ್ನುತಟ್ಟಿ ಕಾನನ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು 1.28 ಲಕ್ಷ ಮಂದಿ ರಿಟ್ವೀಟ್ ಮಾಡಿದ್ದರೆ, 5.54 ಲಕ್ಷ ಮಂದಿ ಲೈಕ್ ಮಾಡಿದ್ದು, ಕಾನನ್ ಫೋಟೋ ವಿಶ್ವದೆಲ್ಲೆಡೆ ವೈರಲ್ ಆಗಿದೆ.

ಹೆಚ್ಚಾಗಿ ಮಿಲಿಟರಿ ಕಾರ್ಯಗಳಿಗೆ ಜರ್ಮನ್ ಅಥವಾ ಡಚ್ ಶೆಪರ್ಡ್ ನಾಯಿಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ಮಾತ್ರ ಬೆಲ್ಜಿಯನ್ ಮಾಲಿನೊಯ್ಸ್ ನಾಯಿಗಳನ್ನು ಬಳಕೆ ಮಾಡಲಾಗುತ್ತದೆ. ಅಸಾಧಾರಣ ಬುದ್ಧಿವಂತಿಕೆ ಮತ್ತು ದೇಹ ಅಥ್ಲೆಟಿಕ್ ಸಾಮರ್ಥ್ಯಕ್ಕೆ ಅನುಗುಣವಾಗಿ ಇರುವ ಕಾರಣ ಈ ನಾಯಿಗಳಿಗೆ ವಿಶೇಷ ತರಬೇತಿ ನೀಡಿ ಕಾರ್ಯಾಚರಣೆಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಈ ಕಾರಣಕ್ಕಾಗಿ ಬಾಗ್ದಾದಿ ಹತ್ಯೆಗೆ ನಿಯೋಜನೆಗೊಂಡಿದ್ದ ಡೆಲ್ಟಾ ಪಡೆಯ ಸದಸ್ಯನಾಗಿದ್ದ ಕಾನನ್ ಗೆ ವಿಶೇಷ ತರಬೇತಿ ನೀಡಲಾಗಿತ್ತು.

ಕಾನನ್ ಮಾಡಿದ್ದು ಏನು?
ಶ್ವೇತ ಭವನದ ಮೂಲಗಳು ಮಾಧ್ಯಮಗಳಿಗೆ ತಿಳಿಸಿದಂತೆ ಅಮೆರಿಕದ ವಿಶೇಷ ಡೆಲ್ಟಾ ಪಡೆ ಅಕ್ಟೋಬರ್ 26 ರಂದು ಸಿರಿಯಾದ ವಾಯುವ್ಯ ಭಾಗದಲ್ಲಿ ಬಾಗ್ದಾದಿ ಅಡಗುತಾಣದ ಮೇಲೆ ಇಳಿದಿತ್ತು. ಈ ಸಂದರ್ಭದಲ್ಲಿ ಕಾನನ್ ಮತ್ತು ಆಕೆಯನ್ನು ನಿಯಂತ್ರಿಸುತ್ತಿದ್ದ ಸಿಬ್ಬಂದಿಯೂ ಹೆಲಿಕಾಪ್ಟರ್ ನಿಂದ ಇಳಿದಿದ್ದರು.

ಅಮೆರಿಕ ಸೈನಿಕರ ದಾಳಿಗೆ ಹೆದರಿ ಬಾಗ್ದಾದಿ ಓಡಿಕೊಂಡು ಹೋಗುತ್ತಿದ್ದ. ಕೂಡಲೇ ಸೇನೆ ಕಾನನ್ ಬಿಟ್ಟಿತ್ತು. ಕ್ಯಾನನ್ ಬಾಗ್ದಾದಿಯನ್ನು ಬೆನ್ನಟ್ಟಲಾರಂಭಿಸಿತು. ಆತನನ್ನು ಬೆನ್ನಟ್ಟಿದ ಶ್ವಾನ ಸುರಂಗ ಕೊನೆಯಾಗುವವರೆಗೂ ಅಟ್ಟಿಸಿಕೊಂಡು ಹೋಯಿತು. ಕೊನೆಗೆ ಸುರಂಗ ಕೊನೆಯಾಯಿತು. ಅಮೆರಿಕ ಸೇನೆ ಬಂಧಿಸುತ್ತದೆ ಎಂಬ ಭಯಕ್ಕೆ ಬಾಗ್ದಾದಿ ದೇಹದಲ್ಲಿ ಕಟ್ಟಿಕೊಂಡಿದ್ದ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ.

ಬಾಂಬ್ ಸಿಡಿತದಿಂದಾಗಿ ಸುರಂಗ ಧ್ವಂಸಗೊಂಡು ಕೆಳಕ್ಕೆ ಬಿದ್ದಿದೆ. ಪರಿಣಾಮ ಶ್ವಾನ ಕಾನನ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಂಬ್ ಸಿಡಿತದಿಂದ ಬಾಗ್ದಾದಿಯನ್ನು ಅಟ್ಟಿಸಿಕೊಂಡು ಹೋದ ಶ್ವಾನಕ್ಕೂ ಗಂಭೀರವಾಗಿ ಗಾಯವಾಗಿತ್ತು. ಅದನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಈಗ ಚಿಕತ್ಸೆ ಕೊಡಿಸಿದ್ದೇವೆ, ಈಗ ಶ್ವಾನ ಆರೋಗ್ಯವಾಗಿದೆ ಎಂದು ಅಮೆರಿಕ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಡೆಲ್ಟಾ ಪಡೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಹತ್ವದ ಪಾತ್ರ ವಹಿಸಿದ್ದ ಕಾನನ್ ಹೆಸರನ್ನು ಬಹಿರಂಗ ಪಡಿಸದೇ ಇರಲು ನಿರ್ಧರಿಸಿತ್ತು. ಬಹಿರಂಗ ಪಡಿಸಿದರೆ ನಮ್ಮ ಶತ್ರುಗಳಿಗೆ ಮಾಹಿತಿಯನ್ನು ನೀಡಿದಂತಾಗುತ್ತದೆ. ಅಷ್ಟೇ ಅಲ್ಲದೇ ನಾಯಿಗೂ ಅಪಾಯ ಎದುರಾಗಬಹುದು ಎಂದು ಹೇಳಿತ್ತು. ಆದರೆ ಡೊನಾಲ್ಡ್ ಟ್ರಂಪ್ ಕಾನನ್ ಸಾಹಸವನ್ನು ಬಣ್ಣಿಸಲೇಬೇಕೆಂದು ತೀರ್ಮಾನಿಸಿ ಟ್ವಿಟ್ಟರ್ ನಲ್ಲಿ ಫೋಟೋ ಅಪ್ಲೋಡ್ ಮಾಡಿ, ದಾಳಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದ ನಾಯಿಯ ಚಿತ್ರವನ್ನು ಪ್ರಕಟಿಸುತ್ತಿದ್ದೇವೆ(ನಾಯಿ ಹೆಸರು ತಿಳಿಸುವುದಿಲ್ಲ) ಐಸಿಸ್ ನಾಯಕ ಬಾಗ್ದಾದಿ ಹತ್ಯೆ ಕಾರ್ಯಾಚರಣೆಯಲ್ಲಿ ಈ ನಾಯಿಯ ಪಾತ್ರ ದೊಡ್ಡದು ಎಂದು ಬರೆದುಕೊಂಡಿದ್ದಾರೆ.

ಬೆಲ್ಜಿಯನ್ ಮಾಲಿನೊಯ್ಸ್ ವಿಶೇಷತೆ ಏನು?
ಅಸಾಧಾರಣ ಬುದ್ಧಿಶಕ್ತಿ, ಚುರುಕು, ಆಕ್ರಮಣಶೀಲ ಮನೋಭಾವ ಮತ್ತು ಅಥ್ಲೆಟಿಕ್ ದೇಹದ ಜೊತೆ ಬೆಲ್ಜಿಯನ್ ಮಾಲಿನೊಯ್ಸ್ ದೇಹದ ಗಾತ್ರವೂ ಸಣ್ಣದು. ಹೀಗಾಗಿ ಈ ನಾಯಿಗಳನ್ನು ಸುಲಭವಾಗಿ ಹೆಲಿಕಾಪ್ಟರ್ ನಿಂದ ಕೆಳಗಡೆ ಇಳಿಸಬಹುದಾಗಿದೆ. ಈ ಕಾರಣಕ್ಕಾಗಿ ವಿಶೇಷ ಪಡೆಯ ಫೇವರೇಟ್ ನಾಯಿ ಎಂದೇ ಪ್ರಖ್ಯಾತಿ ಪಡೆದಿದೆ. ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ಥಾನದಲ್ಲಿನ ವಾತಾವರಣ ಬಿಸಿ ಇರುವ ಕಾರಣ ಈ ನಾಯಿಯನ್ನೇ ಅಮೆರಿಕದ ಸೇನೆ ತನ್ನ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ.   ಇದನ್ನೂ ಓದಿ:ಸುರಂಗದೊಳಗೆ ಅಳುತ್ತಾ ಓಡಿ ಸತ್ತ ಬಾಗ್ದಾದಿ: ನರಹಂತಕನ ಸಾವಿನ ರಹಸ್ಯ

ವಿಶೇಷ ಏನೆಂದರೆ ಅಮೆರಿಕ ಯಾವುದೇ ಮಹತ್ವದ ಕಾರ್ಯಾಚರಣೆಗೆ ಈ ನಾಯಿಯನ್ನೇ ಬಳಸಿಕೊಳ್ಳುತ್ತಿದೆ. 2011ರ ಮೇ 2 ರಂದು ವಿಶ್ವ ವಾಣಿಜ್ಯ ಕೇಂದ್ರದ ದಾಳಿಯ ರೂವಾರಿ, ಆಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ತಂಗಿದ್ದ ಪಾಕಿಸ್ತಾನದ ಅಬೋಟಾಬಾದ್ ನಿವಾಸದ ಮೇಲೆ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳು ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆಯಲ್ಲೂ ಅಮೆರಿಕ ಬೆಲ್ಜಿಯನ್ ಮಾಲಿನೊಯ್ಸ್ ನಾಯಿ ಸಹಾಯ ಮಾಡಿತ್ತು.

ತನ್ನ ಕಾರ್ಯಾಚರಣೆಯಲ್ಲಿ ಧೈರ್ಯದಿಂದ ಪಾಲ್ಗೊಂಡು ಗಾಯಗೊಂಡಿರುವ ನಾಯಿಗೆ ಪರ್ಪಲ್ ಹಾರ್ಟ್ ಅಥವಾ ವೇಲೊರ್ ಮೆಡಲ್ (ಅಮೆರಿಕ ಸೇನೆಯ ಶೌರ್ಯ ಪ್ರಶಸ್ತಿ) ಸಿಗುವುದಿಲ್ಲ. ನಾಯಿಗಳಿಗೆ ಶೌರ್ಯ ಪುರಸ್ಕಾರ ನೀಡಿದರೆ ಸೈನಿಕರ ಸೇವೆಯನ್ನು ಕಡಿಮೆ ಮಾಡಿದಂತೆ ಆಗುತ್ತದೆ ಎಂಬ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಅಮೆರಿಕ ನಾಯಿಗಳನ್ನು ಪುರಸ್ಕರಿಸುವುದರಿಂದ ಹಿಂದೆ ಸರಿದಿದೆ. ಅಮೆರಿಕ ಸೇನೆ ಸೈನಿಕರಿಗೆ ಹೇಗೆ ರ್‍ಯಾಂಕ್ ನೀಡುತ್ತದೋ ಅದೇ ರೀತಿ ನಾಯಿಗಳಿಗೂ ರ್‍ಯಾಂಕ್ ನೀಡುತ್ತದೆ.

ಭಾರತದ ಸಿಆರ್‍ಪಿಎಫ್, ಕೋಬ್ರಾ, ಐಟಿಬಿಪಿ(ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್) ಮತ್ತು ನಕ್ಸಲ್ ನಿಗ್ರಹ ದಳ ಬೆಲ್ಜಿಯನ್ ಮಾಲಿನೊಯ್ಸ್ ನಾಯಿಯನ್ನು ಬಳಸಿಕೊಳ್ಳುತ್ತದೆ. 2016ರ ಜನವರಿ 2 ರಂದು ಪಂಜಾಬಿನಲ್ಲಿರುವ ಪಠಾಣ್‍ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಎನ್‍ಎಸ್‍ಜಿ(ರಾಷ್ಟ್ರೀಯ ಭದ್ರತಾ ತಂಡ) 4 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆಯಲ್ಲೂ ಬೆಲ್ಜಿಯನ್ ಮಾಲಿನೊಯ್ಸ್ ನಾಯಿಯನ್ನು ಬಳಸಲಾಗಿತ್ತು.

Click to comment

Leave a Reply

Your email address will not be published. Required fields are marked *