ಚಿಕ್ಕಮಗಳೂರು: ಮಾಲೀಕನ ಪಕ್ಕದಲ್ಲಿ ಮಲಗಿದ್ದ ನಾಯಿಯನ್ನು ಹಿಡಿಯಲು ಬಂದ ಚಿರತೆಯೊಂದು ವಿಫಲ ಯತ್ನ ನಡೆಸಿರೋ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚೀರನಹಳ್ಳಿ ಗ್ರಾಮದ ರಾಜೀವ್ ಎಂಬವರ ಅಡಿಕೆ ಸುಲಿಯುವ ಮನೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ತರೀಕೆರೆ, ಕಡೂರು, ಬೀರೂರು ಹಾಗೂ ಅಜ್ಜಂಪುರ ಭಾಗದಲ್ಲಿ ಈಗ ಅಡಿಕೆ ಸುಲಿಯುವ ಕಾಲ. ಹೆಂಗಸರೆಲ್ಲಾ ಒಂದೆಡೆ ಕೂತು ಅಡಿಕೆ ಸುಲಿಯುವ ಜಾಗಕ್ಕೆ ಅಡಿಕೆ ಚೇಣಿ ಮನೆ ಅಂತಾರೆ. ಈ ಚೇಣಿ ಮನೆಯಲ್ಲಿ ಹಗಲಿರುಳು ಅಡಿಕೆ ಇರುವ ಕಾರಣ ಇಡೀ ರಾತ್ರಿ ಅಡಿಕೆಯ ಕಾಯುವಿಕೆಗಾಗಿ ಕೆಲಸಗಾರರು ಇರುತ್ತಾರೆ. ಇದೇ ರೀತಿ ಕಳೆದ ರಾತ್ರಿ ಅಡಿಕೆ ಮನೆ ಕಾಯಲು ಇಬ್ಬರು ಕಾರ್ಮಿಕರು ಇದ್ದು, ಈ ವೇಳೆ ಚಿರತೆ ಬಂದಿದೆ. ಅದು ಅಲ್ಲದೇ ಈ ಇಬ್ಬರು ಕಾರ್ಮಿಕರ ಪಕ್ಕದಲ್ಲಿ ನಾಯಿಯೊಂದು ಮಲಗಿತ್ತು. ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು
Advertisement
Advertisement
ನಾಯಿಯನ್ನು ಸೆರೆಹಿಡಿಯಲು ಚಿರತೆ ಸುಮಾರು ಹೊತ್ತು ಹೊಂಚು ಹಾಕಿದೆ. ನಿಧಾನವಾಗಿ ಹೋಗಿ ನಾಯಿಯನ್ನು ಕಚ್ಚಿ ಎಳೆದು ತರುವಷ್ಟರಲ್ಲಿ, ನಾಯಿ ಜೋರಾಗಿ ಕೂಗಿ ಚಿರತೆ ಬಾಯಿಂದ ತಪ್ಪಿಸಿಕೊಂಡಿದೆ. ಆಗ ಕೂಡಲೇ ಎಚ್ಚರಗೊಂಡ ಇಬ್ಬರು ಕೂಲಿ ಕಾರ್ಮಿಕರು ಚಿರತೆಯನ್ನು ಕಂಡು ಗಾಬರಿಯಿಂದ ಕೂಗಾಡಿದ್ದಾರೆ. ಕಾರ್ಮಿಕರು ಕೂಗಾಡುತ್ತಿದ್ದಂತೆ ಚಿರತೆಯೂ ಗಾಬರಿಬಿದ್ದು ಅಲ್ಲಿಂದ ಓಡಿದೆ.
Advertisement
Advertisement
ಒಂದು ವೇಳೆ ಕಾರ್ಮಿಕರ ಜೊತೆ ನಾಯಿ ಇರದಿದ್ದರೆ ಬಹುಶಃ ಇಬ್ಬರು ಕಾರ್ಮಿಕರಲ್ಲಿ ಒಬ್ಬರು ಚಿರತೆ ಬಾಯಿಗೆ ಆಹಾರವಾಗುವ ಸಾಧ್ಯತೆ ಇತ್ತು. ಆದರೆ ನಾಯಿಯಿಂದ ಮಾಲೀಕನ ಪ್ರಾಣ ಉಳಿದಂತಾಗಿದೆ. ನಾಯಿಯ ಸೂಕ್ಷ್ಮ ಹಾಗೂ ಸಮಯ ಪ್ರಜ್ಞೆಯಿಂದ ತನ್ನ ಪ್ರಾಣ ಉಳಿಸಿಕೊಳ್ಳುವುದರ ಜೊತೆ ತನ್ನ ಮಾಲೀಕನ ಪ್ರಾಣವನ್ನೂ ಉಳಿಸಿದೆ. ಈ ಭಾಗಗಳಲ್ಲಿ ಕಳೆದ ಹಲವು ತಿಂಗಳಿಂದ ಚಿರತೆ ಕಾಟ ಯಥೇಚ್ಛವಾಗಿದೆ. ಕೂಡಲೇ ಅರಣ್ಯ ಅಧಿಕಾರಿಗಳು ಚಿರತೆಯನ್ನ ಸೆರೆ ಹಿಡಿದು ಕಾಡಿಗೆ ಬಿಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಚಿರತೆ ಭಯದಿಂದ ಈ ಭಾಗದ ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ‘ಚಿಣ್ಣರ ಧಾಮ’ – ಬೆ.ವಿಮಾನ ನಿಲ್ದಾಣ ಫೌಂಡೇಷನ್