ಅಹಮದಾಬಾದ್: ಸಿಂಹಗಳ ದಾಳಿಗೆ ಒಳಗಾಗಿದ್ದ ಕುರಿಗಾಹಿ ಮಾಲೀಕನನ್ನು ಸಾಕುನಾಯಿ ಕಾಪಾಡಿದ ಘಟನೆ ಗುಜರಾತ್ ನ ಅಮ್ರೆಲಿ ಜಿಲ್ಲೆಯ ಅಂಬಾರ್ಡಿ ಗ್ರಾಮದಲ್ಲಿ ನಡೆದಿದೆ.
ಈ ಮೂಲಕ ನಾಯಿ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಕುರಿಗಾಹಿಯೊಬ್ಬರ ಮೇಲೆ ಸಿಂಹಗಳು ದಾಳಿ ನಡೆಸಿದ ಸಂದರ್ಭದಲ್ಲಿ ಆತ ಸಾಕಿದ ನಾಯಿ ಪ್ರಾಣದ ಹಂಗು ತೊರೆದು ಮಾಲೀಕನ ಪ್ರಾಣ ರಕ್ಷಿಸಿದೆ.
Advertisement
ಭಾವೇಶ್ ಹಮೀರ್ ಭರ್ವಾದ್ (25) ಸಿಂಹಗಳ ದಾಳಿಯಿಂದ ಪಾರಾದ ಕುರಿಗಾಹಿ. ಸಿಂಹಗಳ ದಾಳಿಯಿಂದಾಗಿ ಕುರಿಗಾಹಿ ಭಾವೇಶ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಗ್ರಾಮಸ್ಥರು ಸಾವರ್ಕುಂಡ್ಲಾದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
Advertisement
ಏನಿದು ಘಟನೆ?
ಭಾವೇಶ್ ಎಂದಿನಂತೆ ಶನಿವಾರ ತನ್ನ ಕುರಿಗಳ ಹಿಂಡು ಹಾಗೂ ಸಾಕುನಾಯಿಯೊಂದಿಗೆ ಅಂಬಾರ್ಡಿ ಗ್ರಾಮದ ಹೊರವಲಯದಲ್ಲಿ ಕುರಿಮೇಯಿಸಲು ತೆರಳಿದ್ದರು. ಈ ವೇಳೆ ಕುರಿಹಿಂಡಿನ ಮೇಲೆ ಏಕಾಏಕಿ ಮೂರು ಸಿಂಹಗಳು ದಾಳಿ ನಡೆಸಿದ್ದು, ಮೂರು ಕುರಿಗಳನ್ನು ಕೊಂದು ಹಾಕಿವೆ. ಇದೇ ವೇಳೆ ಸಿಂಹಗಳ ದಾಳಿಯಿಂದ ತನ್ನ ಕುರಿಗಳನ್ನು ರಕ್ಷಿಸಲು ಹೋದ ಭಾವೇಶ್ ಮೇಲೆಯೂ ಸಿಂಹಗಳು ದಾಳಿ ನಡೆಸಿವೆ.
Advertisement
ಅಷ್ಟರಲ್ಲೇ ಆತ ಸಾಕಿದ ನಾಯಿ ಜೋರಾಗಿ ಬೋಗಳಲಾರಂಭಿಸಿ ಸಿಂಹಗಳು ಮುಂದೆ ಬರದಂತೆ ತಡೆದಿದೆ. ನಾಯಿ ನಿರಂತರ ಬೊಗಳುತ್ತಿರುವುದನ್ನು ಕೇಳಿಸಿಕೊಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದ್ದರಿಂದ ಜನರ ಗುಂಪು ನೋಡಿ ಗಾಬರಿಗೊಂಡ ಸಿಂಹಗಳು ಸ್ಥಳದಿಂದ ಓಡಿಹೋಗಿವೆ.