ಬೆಂಗಳೂರು: 6 ವರ್ಷಗಳಿಂದ ಪ್ರೀತಿಯಿಂದ ಸಾಕಿದ್ದ ಶ್ವಾನ (Dog) ನಾಪತ್ತೆ. ಮನೆಯಲ್ಲಿ ಮಡುಗಟ್ಟಿದ ದುಃಖ. ಪ್ರೀತಿಯ ಗುಂಡನನ್ನ ಹುಡುಕಿಕೊಟ್ಟವ್ರಿಗೆ 50 ಸಾವಿರ ರೂ. ಬಹುಮಾನ. ಚಾರ್ಲಿ (charlie 777) ಚಿತ್ರ ತಂಡದ ನೆರವನ್ನೂ ಪಡೆದ ಈ ಸ್ಟೋರಿ, ನಿಜಕ್ಕೂ ಕಣ್ಣಲ್ಲಿ ನೀರು ತರಿಸುತ್ತೆ.
ಚಾರ್ಲಿ ಚಿತ್ರಕ್ಕಿಂತ ಕಮ್ಮಿ ಏನಿಲ್ಲ ಈ ಭಾವನಾತ್ಮಕ ರಿಯಲ್ ಸ್ಟೋರಿ. ಬಸವೇಶ್ವರ ನಗರದ ನಿವಾಸಿ ಗುರುಪ್ರಿಯಾ, ತನ್ನ ಮಗನಂತೆ 6 ವರ್ಷಗಳಿಂದ ಸಾಕಿದ್ದ ಪ್ರೀತಿಯ ನಾಯಿ ಕಳೆದು ಹೋಗಿದ್ದಕ್ಕೆ ಮನೆಯಲ್ಲಿ ದುಃಖ ಮಡುಗಟ್ಟಿದೆ. ಪ್ರೀತಿಯಿಂದ ಸಾಕಿದ್ದ ನಮ್ ಗುಂಡ ಯಾರಿಗಾದ್ರೂ ಸಿಕ್ಕರೆ ತಂದು ಕೊಡಿ. ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಕೊಡಲಾಗುತ್ತೆ ಅಂತ ಬಹುಮಾನವನ್ನೂ ಘೋಷಣೆ ಮಾಡಿದ್ದಾರೆ.
ಅಷ್ಟೆ ಅಲ್ಲ, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವ್ರಿಗೂ ನಾಯಿ ಕಳೆದುಹೋಗಿದೆ, ಹೇಗಾದ್ರೂ ಮಾಡಿ ಹುಡುಕಿ ಕೊಡಿ ಅಂತ ಮನವಿ ಮಾಡಿದ್ದಾರೆ. ನಾಯಿಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಸಿಎಂ, ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ತಮ್ಮ ಕಚೇರಿಯಿಂದಲೇ, ಸ್ಥಳೀಯ ಪೊಲೀಸರಿಗೆ ಫೋನ್ ಮಾಡಿಸಿ, ನಾಯಿ ಹುಡುಕಿ ಕೊಡುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಜಂಬೂ ಸವಾರಿ: ಚಾಮರಾಜನಗರ ಪ್ರತಿನಿಧಿಸುವ ಸ್ತಬ್ಧ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್
ಕಳೆದ ಜೂನ್ 22ರಂದು ಬೆಳಗ್ಗೆ 8:45ರ ವೇಳೆಗೆ ಗುರುಪ್ರಿಯಾ ಮನೆಯಿಂದ ಹೊರಗೆ ಹೋಗಿದ್ರು. ಈ ವೇಳೆ ಗುರುಪ್ರಿಯ ಹೋಗ್ತಿದ್ದ ಬೈಕ್‍ಗೆ ಆಟೋ ಗುದ್ದಿದೆ. ಆಗ ಕೆಳಕ್ಕೆ ಬಿದ್ದ ಗುಂಡ ಅಲ್ಲಿಂದ ಓಡಿ ಹೋಗಿದ್ದಾನೆ. ಅಂದಿನಿಂದ ಈವರೆಗೂ ಗುಂಡ ಸಿಕ್ಕಿಲ್ಲ. ಅದೇ ನೆನಪಲ್ಲಿ ಕಾಲ ಕಳೆಯುತ್ತಿರುವ ಗುರುಪ್ರಿಯಾ, ನಾಯಿ ಪತ್ತೆಗಾಗಿ ಹರಸಾಹಸವೇ ಪಡುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ಪ್ರಾಣಿದಯಾ ಸಂಘದ ಗಮನಕ್ಕೂ ತಂದಿದ್ದಾರೆ. ಅಷ್ಟೆಯಲ್ಲ ಚಾರ್ಲಿ ಚಿತ್ರದ ಶ್ವಾನ ಚಾರ್ಲಿ ಟ್ರೈನರ್ ಪ್ರಮೋದ್ ಬಳಿಯೂ ಈ ಬಗ್ಗೆ ಹೇಳಿಕೊಂಡಿದ್ದು, ಪತ್ತೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಮಿಕ್ಸ್, ಮುಧೋಳ ಬ್ರಿಡ್‍ನ ಈ ಶ್ವಾನವನ್ನು ವಿಜಯಪುರದಿಂದ ತಂದಿದ್ರಂತೆ. ಮಗುವಂತೆ ಸಾಕಿದ್ದ ಶ್ವಾನ, ನಮ್ ಜೊತೆ ಇಲ್ಲ ಅಂತ ಮನೆಯಲ್ಲಿ ಯಾವ ಹಬ್ಬಗಳನ್ನೂ ಆಚರಿಸ್ತಿಲ್ಲ. ಮಧ್ಯರಾತ್ರಿಯೆಲ್ಲ ನೆನಪಾಗಿ ಗುರುಪ್ರಿಯಾ ಕಣ್ಣೀರು ಹಾಕ್ತಿದ್ದಾರೆ. ನಮ್ ಪ್ರೀತಿಯ ಗುಂಡ ಸಿಕ್ಕೇ ಸಿಕ್ತಾನೆ ಅಂತ ಭಾರವಾದ ಹೆಜ್ಜೆಗಳೊಂದಿಗೆ ಹುಡುಕಾಟ ನಡೆಸ್ತಿದ್ದಾರೆ. ಅದೇನೆ ಆಗ್ಲಿ ಮನುಷ್ಯ ಮನುಷ್ಯನೇ ಕಿತ್ತಾಡ್ಕೊಳ್ಳೋ ಈ ಕಾಲದಲ್ಲಿ, ಮೂಕ ಪ್ರಾಣಿಗಾಗಿ ಇಡೀ ಕುಟುಂಬವೇ ಕಣ್ಣೀರು ಹಾಕ್ತಿರೋದು ಭಾವನಾತ್ಮಕತೆಗೆ ಹಿಡಿದ ಕೈಗನ್ನಡಿಯೇ ಸರಿ.