ಬೆಂಗಳೂರು: ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಬಂಧನಕ್ಕೊಳಗಾದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ಪೊಲೀಸರ ವಿಚಾರಣೆ ವೇಳೆ ಹೊಟ್ಟೆ ನೋವಿನಿಂದ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿ ಮಾಂಸದ ಜೊತೆಗೆ ಕುರಿ ಮಾಂಸವನ್ನು ರಾಜಸ್ಥಾನದಿಂದ ಬೆಂಗಳೂರಿಗೆ (Bengaluru) ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಹಾಗೂ ಹಿಂದೂ ಪರ ಕಾರ್ಯಕರ್ತರು ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಪ್ರತಿಭಟಿಸಿದ್ದರು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಮಧ್ಯರಾತ್ರಿ 12:00 ಗಂಟೆ ವೇಳೆಗೆ ಅವರನ್ನು ಕಾಟನ್ ಪೇಟೆ ಪೊಲೀಸರು (Cottonpet Police) ಬಂಧಿಸಿದ್ದರು.
ಬಂಧನವಾಗುತ್ತಿದ್ದAತೆ ಪುನೀತ್ ಕೆರೆಹಳ್ಳಿ ಅಸ್ವಸ್ಥಗೊಂಡಿದ್ದರು. ಇನ್ನೂ ಬೆಳಗಿನ ಜಾವ 4:45ರ ವೇಳೆಗೆ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ವೈದ್ಯರು ಆರೋಗ್ಯ ತಪಾಸಣೆ ವೇಳೆ ಎಲ್ಲಾ ನಾರ್ಮಲ್ ಇರುವುದು ತಿಳಿದುಬಂದಿದೆ. ಅದರೆ ಇನ್ನೂ ಅವರು ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಊಟ ಮಾಡದ ಕಾರಣ ಅಸ್ವಸ್ಥರಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಬೆಂಗಳೂರಿನ ಐಶಾರಾಮಿ ಹಾಗೂ ಸಾಮಾನ್ಯ ಹೋಟೆಲ್‌ಗಳಿಗೆ ರಾಜಸ್ಥಾನದಿಂದ ಬರುತ್ತಿದ್ದ ಮಾಂಸ ಸರಬರಾಜಾಗುತ್ತಿತ್ತು. ಪ್ರಕರಣ ಸಂಬಂಧ ಮಾಂಸ ಸರಬರಾಜು ಮಾಡುತ್ತಿದ್ದ ಅಬ್ದುಲ್ ರಜಾಕ್ ಎಂಬವರನ್ನು ಇಂದು (ಶನಿವಾರ) ವಿಚಾರಣೆ ಮಾಡುವ ಸಾಧ್ಯತೆ ಇದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಬಿಎನ್‌ಎಸ್‌ನ 132 ಆಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) 351 (2) ಶಾಂತಿಭಂಗ ಪ್ರಕರಣ ದಾಖಲಿಸಲಾಗಿದೆ.