ಕಾರವಾರ: ಲಕ್ಷಾಂತರ ಭಕ್ತರು ಮಾಲಾಧಾರಿಯಾಗಿ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಆದರೆ ಬೀದಿ ಶ್ವಾನವೊಂದು (Dog) ಶಬರಿಮಲೆಯ (Sabarimala) ಅಯ್ಯಪ್ಪನ ದರ್ಶನಕ್ಕೆ 200 ಕಿ.ಮೀ ದೂರದಿಂದ ಗುರುಸ್ವಾಮಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಅಯ್ಯಪ್ಪನ (Ayyappa Swamy Temple) ದರ್ಶನಕ್ಕೆ ಹೊರಟಿದೆ.
ಹೌದು.. ಧಾರವಾಡ (Dharwad) ಜಿಲ್ಲೆಯ ಮಂಗಳಗಟ್ಟಿ ಗ್ರಾಮದಲ್ಲಿ ಇದ್ದ ಈ ಶ್ವಾನ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದೆ. ಆದರೆ ಅಚ್ಚರಿಯ ವಿಷಯವೆಂದರೆ ಈ ಶ್ವಾನವನ್ನು ಯಾರೂ ಸಾಕಿಲ್ಲ. ಬೀದಿಯಲ್ಲಿ ಬಿದ್ದ ಆಹಾರ ಸೇವಿಸಿಕೊಂಡು ಕಂಡಲ್ಲಿ ಇರುವ ಈ ನಾಯಿ ಇದೀಗ ಶಬರಿಮಲೆಗೆ ಹೊರಟು ನಿಂತಿದೆ.
ಇದೇ ಗ್ರಾಮದ ಗುರುಸ್ವಾಮಿ, ನಾಗನಗೌಡ ಪಾಟೀಲ್, ಮಂಜುಸ್ವಾಮಿ ಎಂಬುವವರು ತಮ್ಮ ಮೂರು ಜನರ ತಂಡದೊಂದಿಗೆ ಮಾಲೆ ಧರಿಸಿ ಕೇರಳದ ಶಬರಿಮಲೆಗೆ ಪಾದಯಾತ್ರೆ ಮೂಲಕ ದರ್ಶನಕ್ಕೆ ಹೊರಟಿದ್ದರು. ಇವರೊಂದಿಗೆ ಈ ಬೀದಿ ನಾಯಿಯು ಸಹ ಹಿಂಬಾಲಿಸಿದೆ. ಒಂದಷ್ಟು ದೂರ ಬಂದು ಮರಳುತ್ತೆ ಎಂದು ಅಂದುಕೊಂಡಿದ್ದ ಗುರುಸ್ವಾಮಿಗಳು ತಮ್ಮಷ್ಟಕ್ಕೆ ಪಾದಯಾತ್ರೆ ಪ್ರಾರಂಭಿಸಿದರು. ಆದರೆ ಇವರನ್ನೇ ಹಿಂಬಾಲಿಸಿದ ಈ ಶ್ವಾನ ನೂರಾರು ಕಿ.ಮೀ ಕ್ರಮಿಸಿದರೂ ಇವರ ಸಂಘ ಬಿಡಲಿಲ್ಲ. ದೇವರ ಪೂಜೆ, ವಿಶ್ರಾಂತಿ ಹೀಗೆ ಎಲ್ಲೆಂದರಲ್ಲಿ ಸಾಥ್ ನೀಡಿದ ಈ ಶ್ವಾನ ಇವರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡುತ್ತಾ ಇವರೊಂದಿಗೆ ಸಾಗಿದೆ. ಇದನ್ನೂ ಓದಿ: ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ
ಇನ್ನು ಇವರೊಂದಿಗೆ ಹಿಂಬಾಲಿಸಿ ಇವರ ರಕ್ಷಣೆ ಮಾಡುತ್ತಾ ಬರುತ್ತಿದ್ದ ಈ ಶ್ವಾನದ ಬಗ್ಗೆ ಇವರಿಗೂ ಪ್ರೀತಿ ಹುಟ್ಟಿದೆ. ತಾವು ಪಡೆಯುವ ಪ್ರಸಾದವನ್ನು ಇದಕ್ಕೂ ನೀಡಿ ಅಯ್ಯಪ್ಪನ ಮಾಲೆ ಹಾಕಿ ಶಬರಿಮಲೆಗೆ ಈ ಶ್ವಾನದೊಂದಿಗೆ ಪ್ರಯಾಣ ಮುಂದುವರಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಾವರದ ಮೂಲಕ ಶಬರಿಮಲೆಗೆ ಹೊರಟಿದ್ದಾರೆ. ಈ ಶ್ವಾನ ತಮ್ಮೊಂದಿಗೆ ಪ್ರಯಾಣ ಬೆಳಸಿದಾಗಿನಿಂದ ನಮಗೆ ತೊಂದರೆಗಳು ಬರಲಿಲ್ಲ, ಎಲ್ಲವೂ ಒಳಿತಾಗಿದೆ. ಈ ಶ್ವಾನಕ್ಕೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿಸಿ ಅಲ್ಲಿಂದ ವಾಹನದ ಮೂಲಕ ಮರಳಿ ಧಾರವಾಡಕ್ಕೆ ಬಿಡುತ್ತೇವೆ ಎಂದು ಶ್ವಾನದ ಜೊತೆಯಾದ ಗುರುಸ್ವಾಮಿನಾಗನಗೌಡ ಹಾಗೂ ಮಂಜುಸ್ವಾಮಿ ತಿಳಿಸಿದರು. ಇದನ್ನೂ ಓದಿ: ಸಿದ್ದು ಆಪ್ತರಿಂದ ಸಿದ್ದರಾಮಯ್ಯ ಮುಂದಿನ ಸಿಎಂ ಜಪ