ಬಾಗಲಕೋಟೆ: ವೈದ್ಯರ ಮುಷ್ಕರ ಎಫೆಕ್ಟ್ ನಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಜೆಡಿಎಸ್ ಕಾರ್ಯಕರ್ತನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ದಾವಲಸಾಬ್ ಕೊಣ್ಣೂರ (55) ಮೃತ ದುರ್ದೈವಿ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಇರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಮೃತ ದಾವಲಸಾಬ್ ಜ್ವರ, ಅಸ್ತಮಾದಿಂದ ಬಳಲುತ್ತಿದ್ದರು. ಇದರಿಂದ ಕುಟುಂಬಸ್ಥರು ದಾವಲಸಾಬ್ ನನ್ನು ಒಳ್ಳೆಯ ಆಸ್ಪತ್ರೆಯಲ್ಲಿ ತೋರಿಸಬೇಕು ಎಂದು ಬಾಗಲಕೋಟೆಯ ನಗರಕ್ಕೆ ಬಂದಿದ್ದಾರೆ.
ಸೋಮವಾರ ವೈದ್ಯರ ಮುಷ್ಕರ ಇದ್ದ ಹಿನ್ನೆಲೆಯಲ್ಲಿ ದಾವಲಸಾಬ್ ಅವರಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ದೊರೆತಿಲ್ಲ. ಹೀಗಾಗಿ ಎರಡು ಖಾಸಗಿ ಆಸ್ಪತ್ರೆಗೆ ಅಲೆದಾಟ ನಡೆಸಿದ ಬಳಿಕ ದಾವಲಸಾಬ್ ನನ್ನು ನಾವು ಜಿಲ್ಲಾಸ್ಪತ್ರೆಗೆ ಸಾಗಿಸಲು ಮುಂದಾಗಿದ್ದೆವು. ಆದರೆ ಜಿಲ್ಲಾಸ್ಪತ್ರೆ ತಲುಪುವ ಮಾರ್ಗದಲ್ಲೇ ದಾವಲಸಾಬ್ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದರೆ ದಾವಲಸಾಬ್ ಬದುಕುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ ಮಾಡಿದ್ದಾರೆ.