ಬೆಂಗಳೂರು: ಇಂದು ರಾಜ್ಯಾದ್ಯಂತ ಆಸ್ಪತ್ರೆಗಳು ಸ್ತಬ್ಧವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಪ್ರತಿಭಟನೆಗೆ ಕರೆಕೊಟ್ಟಿದ್ದು, ರಾಜ್ಯದಲ್ಲೂ ವೈದ್ಯಕೀಯ ಸೇವೆ ವ್ಯತ್ಯಯವಾಗಲಿದೆ. ರಾಜ್ಯದ ಎಲ್ಲ ಆಸ್ಪತ್ರೆಗಳ ಓಪಿಡಿ (Outdoor Patient Department) ಸ್ತಬ್ಧವಾಗಲಿದೆ.
ಪಶ್ಚಿಮ ಬಂಗಾಳದಲ್ಲಿ ಸೋಮವಾರ ರಾತ್ರಿ ನಡೆದಿದ್ದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಸೋಮವಾರ ದೇಶಾದ್ಯಂತ ವೈದ್ಯರ ಮುಷ್ಕರಕ್ಕೆ ಕರೆ ಕೊಟ್ಟಿದೆ. ಕರ್ನಾಟಕದ ವೈದ್ಯರು ಕೂಡ ‘ಸೇವ್ ಡಾಕ್ಟರ್ಸ್’ ಘೋಷಣೆಯಡಿ ಪ್ರತಿಭಟನೆಗೆ ಸಾಥ್ ಕೊಡಲಿದ್ದಾರೆ. ಹೀಗಾಗಿ ಇಂದು ಖಾಸಗಿ ಆಸ್ಪತ್ರೆ ನರ್ಸಿಂಗ್ ಹೋಂ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳಲ್ಲಿ ತೊಂದರೆ ಎದುರಾಗಲಿದೆ.
ಬಂದ್ ಹೇಗಿರಲಿದೆ?:
ರಾಜ್ಯದ್ಯಾಂತ ಸುಮಾರು 4500 ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗಲಿದೆ. ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ಗಂಟೆವರೆಗೆ ಬಹುತೇಕ ಬಂದ್ ಇರಲಿದ್ದು, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳು ಸೇರಿ ಒಟ್ಟು 600 ಆಸ್ಪತ್ರೆಗಳ ಓಪಿಡಿ ಬಂದ್ ಆಗಲಿದೆ. ಸರ್ಕಾರಿ ವೈದ್ಯರು ಹೋರಾಟಕ್ಕೆ ನೈತಿಕ ಬೆಂಬಲ ನೀಡಿದರೆ ಮಾತ್ರ ಓಪಿಡಿ ಕಾರ್ಯನಿರ್ವಹಿಸುತ್ತದೆ. ಮುಷ್ಕರದಿಂದ ಹೌಸ್ ಸರ್ಜನ್ಸ್, ಮಡಿಕಲ್ ವಿದ್ಯಾರ್ಥಿಗಳ ಮುಷ್ಕರದಿಂದ ರೋಗಿಗಳಿಗೆ ತೊಂದರೆ ಆಗಬಹುದು.
ವೈದ್ಯರ ಬೇಡಿಕೆಗಳು:
ವೈದ್ಯರ ಸುರಕ್ಷತೆಗಾಗಿ ದೇಶದ್ಯಾಂತ ಏಕರೂಪ ಕಾನೂನು ಜಾರಿಯಾಗಬೇಕು. ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ವೈದ್ಯರ ಮೇಲೆ ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾನೂನು ಜಾರಿಗೆ ತರಬೇಕು. ಕಾನೂನು ಉಲ್ಲಂಘನೆ ಮಾಡಿದವರಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಬೇಕು. ಆಸ್ಪತ್ರೆಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಅಲ್ಲದೆ ಸಿಎಂ ಮಮತಾ ಬ್ಯಾನರ್ಜಿ ವೈದ್ಯರಲ್ಲಿ ಬಹಿರಂಗ ಕ್ಷಮೆಯಾಚನೆ ಮಾಡಬೇಕು ಎಂಬುದು ವೈದ್ಯರ ಬೇಡಿಕೆಗಳಾಗಿವೆ.