ಮಡಿಕೇರಿ: ಪ್ರವಾಹ ಸಂತ್ರಸ್ತರ ಆರೋಗ್ಯಕ್ಕಾಗಿ ಖುದ್ದು ಸಿಎಂ ಕುಮಾರಸ್ವಾಮಿಯವರ ಮನವಿಗೆ ಸ್ಪಂದಿಸಿರುವ ವೈದ್ಯರುಗಳು ಭಾನುವಾರ ಮಡಿಕೇರಿಗೆ ದೌಡಾಯಿಸಿದ್ದಾರೆ.
ಶನಿವಾರ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ್ದ ಕುಮಾರಸ್ವಾಮಿಯವರು ಆಹಾರ ವಸ್ತುಗಳನ್ನು ಜನರು ಈಗಾಗಲೇ ನೀಡಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ವಸ್ತುಗಳು ಹರಿದು ಬರುತ್ತಿದೆ. ಆದರೆ ಈಗ ತುರ್ತು ವೈದ್ಯರ ಸಹಾಯಬೇಕಿದೆ ಎಂದು ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿದ ಮೈಸೂರು, ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಿಂದ ಹಿರಿಯ ವೈದ್ಯಾಧಿಕಾರಿಗಳು ಕೊಡಗಿನತ್ತ ಧಾವಿಸಿ ಬಂದಿದ್ದು, ಪರಿಹಾರ ಕಾರ್ಯದ ನೇತೃತ್ವ ವಹಿಸಿಕೊಂಡಿದ್ದಾರೆ.
ಮೈಸೂರಿನ ಕೆ.ಆರ್. ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ ಸೇರಿದಂತೆ ನೆರೆಯ ಜಿಲ್ಲೆಗಳಿಂದ ವೈದ್ಯರ ತಂಡ ಆಗಮಿಸಿ ಜನರ ಶುಶ್ರೂಷೆಯಲ್ಲಿ ತೊಡಗಿದ್ದಾರೆ. ಈಗಾಗಲೇ ತಾತ್ಕಾಲಿಕ ಆಸ್ಪತ್ರೆ ಹಾಗೂ ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ ಔಷಧಿಯನ್ನು ಪೂರೈಸಲಾಗಿದೆ.
ಇದಲ್ಲದೇ ರಾಜ್ಯದ ಹಿರಿಯ ಪೊಲೀಸ್ ಆಧಿಕಾರಿಗಳು, ಕಂದಾಯ ಇಲಾಖೆ, ಅಗ್ನಿ ಶಾಮಕದ ದಳ, ವಿಪತ್ತು ನಿರ್ವಹಣಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಕೂಡ ತಂಡೋಪತಂಡವಾಗಿ ಜಿಲ್ಲೆಗೆ ಬಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಸಂಪಾಜೆ ಹಾಗೂ ಜೋಡುಪಾಲದಲ್ಲಿನ ಜನರ ರಕ್ಷಣೆಯ ಹೊಣೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಹಿಸಿಕೊಂಡಿದ್ದಾರೆ. ಆ ವಿಭಾಗದ ಜನರನ್ನು ಸುಳ್ಯದ ಕೆವಿಜಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸುಳ್ಯದಲ್ಲಿ ಹಲವು ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv