ಗದಗ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಗದಗ ಜಿಮ್ಸ್ ಸಂಸ್ಥೆಗೆ ವಿಲೀನಗೊಳಿಸಿರುವುದನ್ನು ವಿರೋಧಿಸಿ ವೈದ್ಯರು ಹಾಗೂ ಸಿಬ್ಬಂದಿ ನಗರದ ಹೆರಿಗೆ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಗದಗ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯಕ್ಕೆ ವಿಲೀನಮಾಡುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಕೂಡಲೇ ಹಿಂಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಸ್ಟಾಫ್ ನರ್ಸ್ ಅಸೋಸಿಯೇಷನ್, ಫಾರ್ಮಸಿ ಅಸೋಸಿಯೇಷನ್, ಲ್ಯಾಬ್ ಟೆಕ್ನಿಷಿಯನ್, ಆರೋಗ್ಯ ಇಲಾಖೆಯ ವಿವಿಧ ವರ್ಗ ಹಾಗೂ ನೌಕರರ ಸಂಘದಿಂದ ಹೆರಿಗೆ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
Advertisement
ಹೆರಿಗೆ ಆಸ್ಪತ್ರೆಯನ್ನು ಗದಗ ಜಿಮ್ಸ್ ನೊಂದಿಗೆ ವಿಲೀನ ಮಾಡಿದರೆ ರೋಗಿಗಳು ಹಾಗೂ ಸಿಬ್ಬಂದಿಗೆ ಸಾಕಷ್ಟು ತೊಂದರೆಯಾಗುತ್ತದೆ. ತಾಲೂಕು ಮಟ್ಟದ ಆಸ್ಪತ್ರೆ, ಸಾರ್ವಜನಿಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಪದೋನ್ನತಿ ಅಥವಾ ವರ್ಗಾವಣೆಗೊಂಡು ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅವಕಾಶದಿಂದ ವಂಚಿತರಾಗುತ್ತಾರೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಯೇ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.