ತುಮಕೂರು: ದಾಖಲೆ ಪತ್ರ ದೃಢೀಕರಣ ಮಾಡಲು ಜಿಲ್ಲೆಯಲ್ಲಿ ವೈದ್ಯಾಧಿಕಾರಿಯೊಬ್ಬರು 50 ರೂಪಾಯಿಗೆ ಕೈವೊಡ್ಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಸ್ಥಾನಿಕ ವೈದ್ಯಾಧೀಕಾರಿ ಡಾ.ರಾಧಿಕಾ ಅವರ ಲಂಚಾವತಾರದ ವಿಡಿಯೋ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ವೃದ್ಧರೊಬ್ಬರ ವಯಸ್ಸಿನ ಪತ್ರದ ದೃಢೀಕರಣಕ್ಕಾಗಿ ಡಾ.ರಾಧಿಕಾ ಬಳಿ ಬಂದಿದ್ದರು. ಈ ವೇಳೆ ದೃಢೀಕರಣ ಪತ್ರಕ್ಕೆ ಸಹಿ ಹಾಕಲು ವೈದ್ಯೆ 50 ರೂ. ಲಂಚ ಕೇಳಿದ್ದಾರೆ. ಆಗ ವೃದ್ಧರ ಜೊತೆ ಬಂದ ವ್ಯಕ್ತಿ ವೈದ್ಯರಿಗೆ 500 ರೂ. ಮುಖಬೆಲೆಯ ನೋಟ್ ನೀಡಿದ್ದಾರೆ. ಆದ್ರೆ ವೈದ್ಯೆ ಕೇವಲ 50. ರೂ. ಪಡೆದು, ಉಳಿದ 450 ರೂ. ವಾಪಸ್ ಕೊಟ್ಟಿದ್ದಾರೆ.
ಅಲ್ಲದೆ ದೃಢೀಕರಣ ಪತ್ರಕ್ಕೆ ಸಹಿ ಹಾಕಿದ್ದಕ್ಕೆ “ನಿನ್ನ ಬಾಯಲ್ಲಿ ಒಂದು ಮಾತು ಬರುತ್ತಿಲ್ಲವಲ್ಲಾ ಸೈನ್ ಹಾಕಿದಕ್ಕೆ ಹಣ ಕೊಡಬೇಕು ಅಂತ” ಎಂದು ಕೇಳಿ ವೈದ್ಯೆ ಹಣ ಪಡೆದಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಲಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ವೈದ್ಯೆಯ ಅಸಲಿಯತ್ತು ಬಟಾಬಯಲಾಗಿದೆ.