– 5 ಹಂತಗಳಲ್ಲಿ ಪ್ಲ್ಯಾನ್, 4 ಹಂತ ಯಶಸ್ವಿಯಾಗಿತ್ತು
ನವದೆಹಲಿ: ದೆಹಲಿಯ ಕೆಂಪು ಕೋಟೆ (Delhi Red Fort) ಬಳಿ ಸಂಭವಿಸಿದ್ದ ಕಾರು ಸ್ಫೋಟ ತನಿಖೆ ನಡೆಸುತ್ತಿರುವ ಉನ್ನತ ಅಧಿಕಾರಿಗಳು ಬೆಚ್ಚಿಬೀಳುವ ರಹಸ್ಯವನ್ನ ಬಯಲಿಗೆಳೆದಿದ್ದಾರೆ. ಜೈಶ್-ಎ-ಮೊಹಮ್ಮದ್ (JeM) ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಉಗ್ರರು ಮುಂಬರುವ ಡಿಸೆಂಬರ್ 6ರಂದು ದೆಹಲಿ ಸುತ್ತಮುತ್ತಲಿನ ಪ್ರದೇಶದ 6 ಕಡೆ ಸ್ಫೋಟಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಡಿಸೆಂಬರ್ 6 ರಂದೇ ಸ್ಫೋಟಕ್ಕೆ ಪ್ಲ್ಯಾನ್ ಮಾಡಲು ಕಾರಣವೂ ಇದೆ.
ಹೌದು. 1992ರ ಡಿಸೆಂಬರ್ 6 ದೇಶದ ಇತಿಹಾಸದಲ್ಲಿ ಮಹತ್ವದ ದಿನ. ಅಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ವಿವಾದಿತ ರಾಮ ಜನ್ಮಭೂಮಿ ಪ್ರದೇಶದಲ್ಲಿದ್ದ ಬಾಬರಿ ಮಸೀದಿಯನ್ನ (Babri Masjid) ಕರಸೇವಕರು ಧ್ವಂಸಗೊಳಿಸಿದ್ದರು. ಹಾಗಾಗಿ ಮುಂಬರುವ ಡಿಸೆಂಬರ್ 6ರಂದೇ ಬಾಬರಿ ಮಸೀದಿ ಧ್ವಂಸಕ್ಕೆ ಸೇಡು ತೀರಿಸಿಕೊಳ್ಳಲು ಉಗ್ರರು 6 ಕಡೆ ಸ್ಫೋಟಕ್ಕೆ ಪ್ಲ್ಯಾನ್ ಮಾಡಿದ್ದರು. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳ ಪ್ರಮುಖ 6 ಸ್ಥಳಗಳಲ್ಲಿ ಸರಣಿ ಸ್ಫೋಟ ನಡೆಸಲು 5 ಹಂತದ ಯೋಜನೆಯನ್ನ ರೂಪಿಸಿದ್ದರು. ಇದರಲ್ಲಿ 4 ಹಂತ ಯಶಸ್ವಿಯಾಗಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬಾಂಬ್ ದಾಳಿಗೂ ಮುನ್ನ ತಬ್ಲಿಘಿ ಜಮಾತ್ ಮಸೀದಿಗೆ ಭೇಟಿ ನೀಡಿದ್ದ ಉಮರ್ ನಬಿ
ಉಗ್ರರ ಪ್ಲ್ಯಾನ್ ಹೇಗಿತ್ತು?
- ಹಂತ-1: ಮೊದಲಿಗೆ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್‌ನೊಂದಿಗೆ ಸಂಬಂಧ ಹೊಂದಿರುವ ಭಯೋತ್ಪಾದಕ ಮಾಡ್ಯೂಲ್ ರಚನೆ ಮಾಡುವುದು.
- ಹಂತ-2: ಹರಿಯಾಣದ ನುಹ್ ಮತ್ತು ಗುರುಗ್ರಾಮ್‌ನಿಂದ ಪಡೆದ ಸ್ಫೋಟಕ ಸಾಮಗ್ರಿಗಳಿಂದ ಐಇಡಿ ತಯಾರಿಸಲು ಮತ್ತು ಮದ್ದುಗುಂಡುಗಳನ್ನ ಸಿದ್ಧಪಡಿಸಲು ಕಚ್ಚಾ ವಸ್ತುಗಳನ್ನ ಖರೀದಿ ಮಾಡುವುದು.
- ಹಂತ-3: ಅಮೋನಿಯಂ ನೈಟ್ರೇಟ್‌ನಂತಹ ರಾಸಾಯನಿಕಗಳಿಂದ IED ತಯಾರಿಸುವುದು ಮತ್ತು ಸಂಭಾವ್ಯ ಸ್ಥಳಗಳನ್ನ ಗುರುತಿಸಿ ಅವುಗಳ ಮೇಲ್ವಿಚಾರಣೆ ನಡೆಸುವುದು.
- ಹಂತ-4: ಸಂಭಾವ್ಯ ಸ್ಥಳಗಳ ಮೇಲ್ವಿಚಾರಣೆ ನಡೆಸಿದ ಬಳಿಕ ಮಾಡ್ಯೂಲ್‌ನ ಸದಸ್ಯರಿಗೆ ಬಾಂಬ್‌ಗಳನ್ನ ಹಂಚಿಕೆ ಮಾಡುವುದು.
- ಹಂತ-5 (ಅಂತಿಮ): ದೆಹಲಿಯ 6 ರಿಂದ 7 ಸ್ಥಳಗಳಲ್ಲಿ ಅಂದುಕೊಂಡಂತೆ ಸರಣಿ ಸ್ಫೋಟ ನಡೆಸಬೇಕು ಅನ್ನೋದು ಉಗ್ರರ ಮಾಸ್ಟರ್ ಪ್ಲ್ಯಾನ್ ಆಗಿತ್ತು.
ತನಿಖಾಧಿಕಾರಿಗಳ ಪ್ರಕಾರ, ಈ ವರ್ಷದ ಆಗಸ್ಟ್‌ನಲ್ಲೇ ದಾಳಿಗಳನ್ನ ನಡೆಸಬೇಕು ಅನ್ನೋದು ಮೂಲ ಪ್ಲ್ಯಾನ್ ಆಗಿತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ, ಆದ್ದರಿಂದ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸದ ದಿನವೇ ಸ್ಫೋಟಿಸಲು ಯೋಜನೆ ರೂಪಿಸಲಾಗಿತ್ತು. ಅಲ್ಲದೇ ಮೊದಲು ಉತ್ತರ ಪ್ರದೇಶದ ರಾಮ ಮಂದಿರವನ್ನೂ ಟಾರ್ಗೆಟ್ ಮಾಡಲಾಗಿತ್ತು. ಬಳಿಕ ದೆಹಲಿಗೆ ಬದಲಾಯಿಸಲಾಯಿತು ಎಂದು ತನಿಖಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಲೆಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದ ʼಉಗ್ರʼನ ಜೊತೆ ಪತ್ನಿ ಎಷ್ಟು ಎಂದು ಕೇಳಿದ ಟ್ರಂಪ್



