ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಬಳ್ಳಾರಿ ಸೀಮೆಯ ಮೇರು ಹೆಸರು ರಂಜಾನ್ ಸಾಬ್. ಏಕಕಾಲಕ್ಕೆ ಸಾವಿರಾರು ಜನರನ್ನು ಸೇರಿಸುವ ಛಾತಿ ಅವರಿಗಿತ್ತು. ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳಲೇಬೇಕೆಂಬ ಜಿದ್ದಿನೊಂದಿಗೆ 1952ರಲ್ಲಿ ನಡೆದ ಚಳವಳಿಯಲ್ಲಿ ಕೋ. ಚನ್ನಬಸಪ್ಪ ಅವರೊಂದಿಗೆ ಮುಂಚೂಣಿಯಲ್ಲಿ ಇದ್ದವರು ರಂಜಾನ್ ಸಾಬ್.
ಏಕೀಕರಣ ಚಳವಳಿ ಸಂದರ್ಭದಲ್ಲಿ ನಡೆದ ಘರ್ಷಣೆಯಿಂದಾಗಿ ಒಟ್ಟು 1,400 ಜನ ಜೈಲು ಸೇರಬೇಕಾಯಿತು. ಆಂಧ್ರ ಸ್ಥಾಪನೆ ಬಳಿಕ 1953, ಅ.1ರಂದು ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮ, ಕರ್ನಾಟಕ ವಿರೋಧಿಗಳ ಕೆಂಗಣ್ಣಿಗೆ ಗುರಿ ಆಗಿತ್ತು. ಅಂದು ಸಂಜೆ ಸಮಾರಂಭದ ಪೆಂಡಾಲ್ ಕಾಯುವ ಕೆಲಸ ರಂಜಾನ್ ಸಾಬ್ ಅವರದ್ದಾಗಿತ್ತು. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಹಿರಿಯ ವರದಿಗಾರ ಸುಖ್‌ಪಾಲ್ ಪೊಳಲಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ರಾತ್ರಿ 2.30ರ ಸುಮಾರಿಗೆ ಪೆಂಡಾಲ್‌ನಲ್ಲೇ ನಿದ್ದೆಗೆ ಜಾರಿದ್ದ ಅವರ ಮೇಲೆ ಆಸಿಡ್ ಬಲ್ಬ್ ಎಸೆಯಲಾಯಿತು. ತೀವ್ರ ಗಾಯಗೊಂಡ ಸ್ಥಿತಿಯಲ್ಲೂ ಅವರು ದಾಳಿಮಾಡಿದವರ ವಿರುದ್ಧ ತಿರುಗಿ ಬಿದ್ದರು. ಆದರೆ, ತೀವ್ರ ರಕ್ತಸ್ರಾವದ ಹಿನ್ನೆಲೆ ಗೋಶ್ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದರು. ಅಂದು ಸಂಜೆ 4 ಗಂಟೆಗೆ ಸಭಾ ಮಂಟಪದಲ್ಲಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು, ʻಕನ್ನಡ ನಾಡಿಗಾಗಿ, ಭಾಷೆಗಾಗಿ, ಕಲೆಗಾಗಿ ದುಡಿದು ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಏಕೈಕ ವ್ಯಕ್ತಿ ರಂಜಾನ್ ಸಾಬ್ʼ ಎಂದು ಹಾಡಿ ಹೊಗಳಿದ್ದೇ ಸಾಕ್ಷಿ. ಈ ಘಟನೆ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಕನ್ನಡ ರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಅಮೆರಿಕಾ ಚುನಾವಣೆಯಲ್ಲಿ ಈಗ ʼಕಸʼ ಪಾಲಿಟಿಕ್ಸ್ – ಕಸದ ಲಾರಿ ಚಲಾಯಿಸಿ ಬೈಡನ್‌ಗೆ ಟ್ರಂಪ್ ಟಾಂಗ್