ಲಿವರ್ ಮೋರ್‌ನ ಶಿವವಿಷ್ಣು ದೇವಾಲಯ ಅಮೆರಿಕದ ಬೃಹತ್ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ನಿರ್ಮಾಣ ಕಾರ್ಯ 1985ರಲ್ಲಿ ಆರಂಭವಾಗಿ 1992ರಲ್ಲಿ ಪೂರ್ಣಗೊಂಡಿತು.
ದೇವಾಲಯದ ವಾಸ್ತುನಿರ್ಮಾಣದಲ್ಲಿ ಉತ್ತರ ಮತ್ತು ದಕ್ಷಿಣ ಭಾರತೀಯ ವಾಸ್ತುಶೈಲಿಗಳು ಸುಂದರವಾಗಿ ಸೇರಿಕೊಂಡಿವೆ. ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆಯಾಗಿದೆ. ದೇವಾಲಯದ ಅಂಗಣದ ಸುತ್ತ ಗಣೇಶ, ಲಕ್ಷ್ಮೀದೇವಿ, ದುರ್ಗೆ, ಅಯ್ಯಪ್ಪ ಸ್ವಾಮಿ ಗುಡಿಗಳಿವೆ. ಇಲ್ಲಿಗೆ ಹೆಚ್ಚಿನ ವಿಗ್ರಹಗಳನ್ನು 1985ರಲ್ಲಿ ತಮಿಳುನಾಡು ಸರ್ಕಾರ ಕಾಣಿಕೆಯ ರೂಪದಲ್ಲಿ ನೀಡಿತ್ತು. ಅಸಂಖ್ಯ ಭಕ್ತರನ್ನು ಆಕರ್ಷಿಸುವ ಈ ದೇವಾಲಯದಲ್ಲಿ ಎಲ್ಲ ಸಮುದಾಯಗಳ ಜನರಿಗೂ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಇದೆ. ಪ್ರತಿ ವರ್ಷವೂ ಇಲ್ಲಿ ಶಿವರಾತ್ರಿ ಹಬ್ಬದ ದಿನ ವಿಶೇಷ ಪೂಜಾ ಕೈಂಕರ್ಯ, ವಿವಿಧ ಅಭಿಷೇಕಗಳನ್ನು ನೆರವೇರಿಸಲಾಗುತ್ತದೆ.
ಅಮೆರಿಕದಲ್ಲಿ ಇನ್ನೂ ಹಲವು ಶಿವದೇವಾಲಯಗಳಿವೆ. ಡೆನ್ವರ್ (ಕೊಲರಾಡೋ)ನ ಶಿವ ದೇವಾಲಯ ಹದಿನೈದು ವರ್ಷಗಳಷ್ಟು ಹಳೆಯದು. ನಾರ್ತ್ ಕೆರೋಲಿನಾದ ಮೌಂಟ್ ಸೋಮ ಎಂಬ ಪರ್ವತದಲ್ಲಿ ಶ್ರೀಸೋಮೇಶ್ವರ ದೇವಾಲಯ ಇದೆ. ಇದನ್ನು ʻಪಶ್ಚಿಮದ ಕೈಲಾಸ’ ಎಂದು ಕರೆಯಲಾಗುತ್ತದೆ. ವಾಷಿಂಗ್ಟನ್ ಡಿಸಿ ಮತ್ತು ದಕ್ಷಿಣ ಫ್ಲೋರಿಡಾದಲ್ಲಿ ಶಿವ-ವಿಷ್ಣು ದೇವಾಲಯಗಳಿವೆ.