ಚೆನ್ನೈ: ನಟಿ ತ್ರಿಷಾ ಕುರಿತು ಡಬ್ಬಲ್ ಮೀನಿಂಗ್ ಹೇಳಿಕೆ ಪ್ರಕರಣದಲ್ಲಿ ಅರೆಸ್ಟ್ ಆಗಿದೆ, ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ರಿಲೀಸ್ ಆಗಿದ್ದಾರೆ.
ಸತತ ಒಂದೂವರೆ ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಬಳಿಕ ಉದಯನಿಧಿ ಸ್ಟಾಲಿನ್ ಅವರನ್ನ ಸೆಂಗಿಪಟ್ಟಿ ಪೊಲೀಸರು ಮಂಗಳವಾರ (ಇಂದು) ಬಿಡುಗಡೆ ಮಾಡಿದ್ದಾರೆ. ಮದ್ರಾಸ್ ಹೈಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
#WATCH | Tamil Nadu LoP and DMK leader Udhayanidhi Stalin leaves from Sengipatti Police Station in Thanjavur. He was detained by the Police earlier today, in connection with a case registered over his alleged remarks during a public meeting.
(Video: DMK) pic.twitter.com/wiHZpDeQpS
— ANI (@ANI) August 4, 2026
ಇದಕ್ಕೂ ಮುನ್ನ ಬಂಧಿತರಾಗಿದ್ದ ಉದಯನಿಧಿ ಸ್ಟಾಲಿನ್ ಅವರನ್ನ ಅದೇ ದಿನ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಏನಿದು ವಿವಾದ?
ತಂಜಾವೂರಿನಲ್ಲಿ ಕಾವೇರಿ ನೀರಿನ ಬಿಕ್ಕಟ್ಟಿನ ಕುರಿತು ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ವಿಷಯದ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಅವರ ಏಕೈಕ ಚಿಂತೆ ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇಗೆ ಹಾಕುವುದು ಎಂಬುದು ಅಷ್ಟೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದರು.
ಇದೇ ವೇಳೆ ಜನಸಮೂಹದಿಂದ ‘ತ್ರಿಷಾ… ತ್ರಿಷಾ…’ ಎಂಬ ಘೋಷಣೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ, ನಗುಮುಖದೊಂದಿಗೆ ತಮಿಳಿನಲ್ಲಿ ದ್ವಂದ್ವಾರ್ಥ ಬರುವ ರೀತಿಯಲ್ಲಿʼ ಯಾವ ನೀರು ಬರುತ್ತದೋ ಇಲ್ಲವೋ, ಆ ನೀರು ಬರಲೇಬೇಕುʼ ಎಂದು ಹೇಳಿದರು. ಈ ಮಾತು ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿ, ಮಹಿಳೆಯನ್ನು ಅವಮಾನಿಸುವ ಹಾಗೂ ಅಶ್ಲೀಲ ಅರ್ಥ ನೀಡುವ ರೀತಿಯಲ್ಲಿದೆ ಎಂದು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆರೋಪಿಸಿದ್ದವು.

ಪೊಲೀಸರು ಚೆನ್ನೈನ ನೀಲಂಕರೈಯಲ್ಲಿರುವ ಉದಯನಿಧಿ ನಿವಾಸಕ್ಕೆ ತೆರಳಿದ ಕೂಡಲೇ ಅವರ ಪರ ವಕೀಲರು ಮದ್ರಾಸ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್, ತಂಜಾವೂರು ಪೊಲೀಸರು ಉದಯನಿಧಿಯನ್ನು ಬಂಧಿಸಿ ವಿಚಾರಣೆಗಾಗಿ ತಂಜಾವೂರಿಗೆ ಕರೆದೊಯ್ದಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಉದ್ದೇಶ ಇಲ್ಲ. ವಿಚಾರಣೆ ಪೂರ್ಣಗೊಂಡ ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡುವುದಾಗಿ ಸರ್ಕಾರದ ಪರ ವಾದ ಮಂಡಿಸಿದರು. ಈ ವಾದವನ್ನು ಪರಿಗಣಿಸಿದ ಮದ್ರಾಸ್ ಹೈಕೋರ್ಟ್, ಮಂಗಳವಾರವೇ ಉದಯನಿಧಿ ಸ್ಟಾಲಿನ್ ಅವರನ್ನ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು.
