ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪುತ್ತಿದ್ದಂತೆಯೇ ಕಾಂಗ್ರೆಸ್ಸಿನ ಕೆಲವು ಮಾಜಿ ಸಚಿವರು ಅಸಮಾಧಾನ ಹೊರ ಹಾಕಿದ್ದು, ಹೈಕಮಾಂಡ್ ಜೊತೆಗೆ ಮುನಿಸಿಕೊಂಡಿದ್ದಾರೆ.
ಶಾಸಕ ಎಂ.ಬಿ ಪಾಟೀಲ್ ಬೆನ್ನಲ್ಲೇ ಮಾಜಿ ಸಚಿವ ಎಚ್.ಕೆ ಪಾಟೀಲ್ ಕೂಡ ಮುನಿಸಿಕೊಂಡಿದ್ದು, ಕೈ ಮುಖಂಡರ ಮನವೊಲಿಕೆಗೂ ಜಗ್ಗುತ್ತಿಲ್ಲ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಡಿ.ಕೆ ಶಿವಕುಮಾರ್ ಅವರು ಎಚ್.ಕೆ ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಮನವೊಲಿಕೆ ಯತ್ನ ಮಾಡಿದ್ದರು. ಚರ್ಚೆ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮದೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದು. ಡಿಕೆಶಿ ನಂತರ ಶಿವಾಜಿನಗರ ಶಾಸಕ ರೋಷನ್ ಬೇಗ್, ಹಿರಿಯ ಮುಖಂಡ ಜಾಫರ್ ಶರೀಷ್ ಆಗಮಿಸಿ ಮನವೊಲಿಕೆಗೆ ಮುಂದಾಗಿದ್ದರು.
Advertisement
Advertisement
ಇದೆಲ್ಲ ಬೆಳವಣಿಗೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಡಿ.ಕೆ ಶಿವಕುಮಾರ್ ಹಾಗೂ ರೋಷನ್ ಬೇಗ್ ಜೊತೆಗೆ ಪಕ್ಷದ ವಿಚಾರ ಚರ್ಚೆ ಮಾಡಿದ್ದೇನೆ. ನನ್ನ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಅತಿ ಸೂಕ್ಷ್ಮವಾದ ವಿಚಾರ. ನನ್ನ ನಿಲುವನ್ನು ಮಂಗಳವಾರ ತಿಳಿಸುತ್ತೇನೆ ಎಂದರು.
Advertisement
Advertisement
ದೆಹಲಿಯಿಂದ ಕೆಲವು ಮುಖಂಡರು ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಒಂದು ಮೊಬೈಲ್ ಕರೆ ಕೂಡಾ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.