– ಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲ ಸ್ತೋತ್ರ ಪಠಿಸಿದ ಡಿಕೆಶಿ
– ಡಿಕೆಶಿ ಭೇಟಿ ಬೆನ್ನೇ ಇಂದು ಸಿದ್ದರಾಮಯ್ಯರಿಂದ ಹಾಸನಾಂಬೆ ದರ್ಶನ
ಹಾಸನ: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಗೆ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಹಾಸನಾಂಬೆ ಸನ್ನಿಧಿಯಲ್ಲಿ ಮಹಾಪ್ರಸಾದ ಸಿಕ್ಕಿದೆ.
ಮಂಗಳವಾರ ರಾತ್ರಿ ಪತ್ನಿಯೊಂದಿಗೆ ಹಾಸನಾಂಬೆ (Hassanamba Temple) ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಡಿಸಿಎಂಗೆ ವಿಜಯೀ ಶ್ರೇಯಸ್ಸು ಲಭಿಸಲೆಂದು ನಾರಾಯಣಿ ನಮಸ್ಕಾರ ಮಂತ್ರದ ಮೂಲಕ ಪೂಜೆ. ಸಲ್ಲಿಸಲಾಯಿತು. ಸುಮಾರು ಐದು ನಿಮಿಷ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದ ನಾರಾಯಣಿ ನಮಸ್ಕಾರ ಮಂತ್ರ ಹೇಳಿ ಅರ್ಚಕರು ಪೂಜೆ ನೆರವೇರಿಸಿದರು.
ಪೂಜೆ ನೇರವೇರಿಸುವ ವೇಳೆ ಡಿಕೆಶಿ ʻಶತ್ರುವಿನ ಮೇಲೆ ವಿಜಯ ಸಾಧಿಸಲು ಖಡ್ಗಮಾಲ ಸ್ತೋತ್ರʼ ಪಠಿಸಿದರು. ಇದೇ ಶುಭ ಸಮಯದಲ್ಲಿ ದೇವಿಯ ಬಲಗಡೆಯಿಂದ ಹೂವು ವರದವಾಗಿ ಬಿದ್ದಿತು. 2 ಬಾರಿ ದೇವಿಯ ಬಲಭಾಗದ ಹೂವು ಬಿದ್ದಿತು.
ಪೂಜೆ ಬಳಿಕ ಮಾತನಾಡಿದ ಡಿಕೆಶಿ, ನಾನುಂಟು.. ಆ ತಾಯಿ ಉಂಟು ನಮಗೆ, ನಿಮಗೆ, ಎಲ್ಲರಿಗೂ ಭಗವಂತ ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದ್ರು.
ಇಂದು ಸಿಎಂ ಭೇಟಿ
ಮಂಗಳವಾರ ರಾತ್ರಿ ಡಿಸಿಎಂ ಭೇಟಿ ನೀಡಿದ ಪೂಜೆ ಸಲ್ಲಿಸಿದ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಹಾಸನಾಂಬ ಸನ್ನಿಧಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದು, ಅಲ್ಲಿಂದ ಹಾಸನಾಂಬೆ ದರ್ಶನಕ್ಕೆ ತೆರಳಲಿದ್ದಾರೆ. ದರ್ಶನ ಪಡೆದು ಮಧ್ಯಾಹ್ನ 12 ಗಂಟೆಗೆ ವಾಪಸ್ ಆಗಲಿದ್ದಾರೆ. ಕಳೆದ 2 ವರ್ಷಗಳಿಂದ ಸಿಎಂ ಹಾಸನಾಂಬೆ ದರ್ಶನ ಪಡೆಯುತ್ತಿರುವುದು ಗಮನಾರ್ಹ.