ಡಿಕೆಶಿಗೆ ಹೈ ಬಿಪಿ, ಹೊಟ್ಟೆ ನೋವು-ಆಸ್ಪತ್ರೆಗೆ ದಾಖಲು

Public TV
2 Min Read
DKSHI Daughter Aishwarya Shivakumar 1 copy

-ಡಿಕೆಶಿ ಪುತ್ರಿಯ ವಿಚಾರಣೆ ಅಂತ್ಯ, ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ನವದೆಹಲಿ: ಇಂದು ಒಂದು ಕಡೆ ಮಗಳ ವಿಚಾರಣೆ ನಡೆಯುತ್ತಿದ್ದರೆ, ಮಗದೊಂದು ಕಡೆ ಡಿಕೆ ಶಿವಕುಮಾರ್ ವಿಚಾರಣೆ ಕೂಡ ನಡೆದಿತ್ತು. ವಿಚಾರಣೆ ವೇಳೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಡಿಕೆಶಿ ಅವರನ್ನು ಹತ್ತಿರದ ಆರ್‍ಎಂಎಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸದ್ಯ ವೈದ್ಯರ ಸಲಹೆ ಮೇರೆಗೆ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರ ಇಡಿ ಕಸ್ಟಡಿ ಅವಧಿ ಮುಗಿಯಲಿದ್ದು, ನಾಳೆ ಮಧ್ಯಾಹ್ನ ಕೋರ್ಟ್ ಮುಂದೆ ಹಾಜರು ಪಡಿಸಲಾಗುತ್ತಿದೆ. ವಿಚಾರಣೆಗಾಗಿ ಮತ್ತೆ 4 ದಿನ ಕಸ್ಟಡಿಗೆ ಒಪ್ಪಿಸುವಂತೆ ಇಡಿ ಕೋರುವ ಸಾಧ್ಯತೆ ಇದೆ.

DKSHI Daughter Aishwarya Shivakumar 1

ಸಮನ್ಸ್ ನೀಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ನಾಲ್ಕು ದಿನ ವಿಚಾರಣೆಗೆ ಹಾಜರಾಗಿದ್ದರು. ಅಧಿಕಾರಿಗಳು ವಶಕ್ಕೆ ಪಡೆದ ಮೇಲೆ 10 ದಿನ ವಿಚಾರಣೆ ನಡೆಸಿದ್ದಾರೆ. ಒಟ್ಟು 14 ದಿನ ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗಿದ್ದು, ಜಾಮೀನು ನೀಡಬೇಕೆಂದು ಡಿಕೆಶಿ ಪರ ವಕೀಲರು ನಾಳೆ ನ್ಯಾಯಾಲಯದ ಮುಂದೆ ಮನವಿ ಮಾಡುವ ಸಾಧ್ಯತೆಗಳಿವೆ. ಇತ್ತ ಇಡಿ ಪರ ವಕೀಲರು ಡಿ.ಕೆ.ಶಿವಕುಮಾರ್ ವಿಚಾರಣೆಗೆ ಸ್ಪಂದಿಸುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕಲೆ ಹಾಕಬೇಕಿದೆ. ಹೆಚ್ಚುವರಿ ನಾಲ್ಕು ದಿನಾ ಕಸ್ಟಡಿ ವಿಸ್ತರಿವಂತೆ ಇಡಿ ಮನವಿ ಮಾಡುವ ಸಾಧ್ಯತೆಗಳಿವೆ.

ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಇವತ್ತು ಇ.ಡಿ. ಮುಂದೆ ಹಾಜರಾಗಿದ್ದರು. ದೆಹಲಿಯ ಲೋಕಭವನದಲ್ಲಿರೋ ಇಡಿ ಕಚೇರಿಗೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾದ ಐಶ್ವರ್ಯಗೆ ಇಡಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ್ದಾರೆ. ಐಶ್ವರ್ಯ ಹೆಸರಲ್ಲಿರುವ ಆಸ್ತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಡಿ ಅಧಿಕಾರಿಗಳ ಪ್ರಶ್ನೆಯನ್ನು ಡಿಕೆಶಿ ಪುತ್ರಿ ಸಮರ್ಥವಾಗಿಯೇ ಎದುರಿಸಿದ್ದಾರೆ. ವಿಚಾರಣೆಗೆ ಮುನ್ನ ತಂದೆ ಡಿಕೆಶಿಯನ್ನು ಐಶ್ವರ್ಯ ಭೇಟಿಯಾಗಿದ್ದಾಗಿ ತಿಳಿದು ಬಂದಿದೆ.

DKSHI Daughter Aishwarya Shivakumar 2 copy

ಯಾವುದೇ ಕಾರಣಕ್ಕೂ ಧೃತಿಗೇಡಬೇಡ, ಧೈರ್ಯವಾಗಿ ವಿಚಾರಣೆ ಎದುರಿಸು ಅಂತ ಡಿಕೆಶಿ ಹೇಳಿದ್ದರು ಎನ್ನಲಾಗಿದೆ. ವಿಚಾರಣೆಗೆ ಹಾಜರಾದ ಐಶ್ವರ್ಯಗೆ ಸಂಬಂಧಿ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಪತ್ನಿ ಸಾಥ್ ನೀಡಿದ್ದರು. ಇಡಿ ಅಧಿಕಾರಿಗಳು ವಿಚಾರಣೆ ನಡೆಸುವಾಗ ಪುತ್ರಿ ಐಶ್ವರ್ಯ ತಂದೆಯ ಫಾರ್ಮುಲಾ ಬಳಸಿ ಖಡಕ್ ಉತ್ತರಗಳನ್ನು ನೀಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ.

 

ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿರುವ ಐಶ್ವರ್ಯ, ನನಗೆ ಗೊತ್ತಿರುವ ಮತ್ತು ನೆನಪಿನಲ್ಲಿರುವ ವಿಷಯಗಳನ್ನು ಮಾತ್ರ ಹೇಳುತ್ತೇನೆ. ನನಗೆ ತಿಳಿಯದಿರದ ಪ್ರಶ್ನೆಗಳಿಗೆ ದಾಖಲೆ ನೋಡಿ ಮತ್ತು ಚಾರ್ಟೆಡ್ ಅಕೌಂಟಂಟ್ ಬಳಿ ಕೇಳಿ ಹೇಳುತ್ತೇನೆ. ನನಗೆ ಗೊತ್ತಿಲ್ಲದೇ ಯಾವ ವ್ಯವಹಾರಗಳು ನಡೆದಿಲ್ಲ. ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ಇದೆ. ನನ್ನ ಎಲ್ಲ ವ್ಯವಹಾರಗಳಿಗೆ ತಂದೆಯ ಆರ್ಥಿಕ ನೆರವು ಇದೆ. ಎಲ್ಲ ವ್ಯವಹಾರಗಳನ್ನು ಘೋಷಿಸಿಕೊಂಡು ತೆರಿಗೆಯನ್ನು ಪಾವತಿಸಿದ್ದೇನೆ. ತಂದೆ ಜೊತೆ ನಾನು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದೇನೆ ಎಂದು ಐಶ್ವರ್ಯ ದಿಟ್ಟ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *