ಚೆನ್ನೈ: ಇಂಡಿಯಾ (INDIA) ಒಕ್ಕೂಟ ಒಟ್ಟಾಗಿ ಉಪರಾಷ್ಟ್ರಪತಿ ಚುನಾವಣೆ ಎದುರಿಸಲಿದೆ. ನಾವು ಆತ್ಮಸಾಕ್ಷಿಯ ಮತಗಳನ್ನು ಕೋರಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಎಂದು ಹೇಳಿದರು.
ತಮಿಳುನಾಡಿನ (Tamilnadu) ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಉಪರಾಷ್ಟ್ರಪತಿ ಚುನಾವಣೆಯ ಕುರಿತಾಗಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟ ಮತ್ತು ವಿರೋಧ ಪಕ್ಷಗಳು ಎನ್‌ಡಿ ಅಭ್ಯರ್ಥಿ ಸಿ.ಪಿ ರಾಧಾಕೃಷ್ಣನ್ ವಿರುದ್ಧ ಮತ ಚಲಾಯಿಸುತ್ತವೆ. ಅಡ್ಡ ಮತದಾನವಾಗುವ ಸಾಧ್ಯತೆ ಇರುತ್ತೆ. ಆದರೆ ನಾನು ಆತ್ಮಸಾಕ್ಷಿಯ ಮತಗಳ ಬಗ್ಗೆ ನಂಬಿಕೆಯಿಟ್ಟಿದ್ದೇನೆ. ಅಡ್ಡ ಮತದಾನದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ
ಸುಪ್ರೀಂ ಕೋರ್ಟ್ ಆಧಾರ್ ಗುರುತಿನ ಚೀಟಿಯನ್ನು 12ನೇ ದಾಖಲೆ ಎಂದು ಪರಿಗಣಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಧಾರ್ ಗುರುತಿನ ಚೀಟಿ ಪ್ರತಿಯೊಬ್ಬ ಭಾರತೀಯರಿಗೂ ಅತ್ಯವಶ್ಯವಾದ ದಾಖಲೆ. ಈ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದ ಈ ಯೋಜನೆ ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲ ಮಾಡಿದೆ ಎಂದು ತಿಳಿಸಿದರು.