ರಾಮನಗರ: ಕಾಂಗ್ರೆಸ್‍ನ ಟ್ರಬಲ್ ಶೂಟರ್, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬದಲಾಗಿ ಪುತ್ರ ಆಕಾಶ್ ಇಂದು ಪೂರ್ವಿಕರಿಗೆ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ಗೌರಿ-ಗಣೇಶ ಹಬ್ಬಕ್ಕೆ ಸ್ವಗ್ರಾಮಕ್ಕೆ ತೆರಳಿ ಪೂರ್ವಿಕರ ಸಮಾಧಿ ಬಳಿ ಪೂಜೆ ಸಲ್ಲಿಸಲು ಬಿಡುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದರು. ಆದರೆ ತಂದೆ ಡಿಕೆ ಶಿವಕುಮಾರ್ ಸ್ಥಾನದಲ್ಲಿ ನಿಂತು ಅವರ ಪುತ್ರ ಆಕಾಶ್ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ತಮ್ಮ ಪೂರ್ವಿಕರ ಸಮಾಧಿಗೆ ಪೂಜೆ ಪುರಸ್ಕಾರ ನೆರವೇರಿಸಿದರು.
ಭಾನುವಾರ ಡಿಕೆಶಿಗೆ ರಿಲೀಫ್ ನೀಡಿದ್ದ ಇಡಿ ಅಧಿಕಾರಿಗಳು ಗೌರಿ-ಗಣೇಶ ಹಬ್ಬದ ದಿನವೂ ಸಹ ಬಿಡದೇ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಹೀಗಾಗಿ ಪೂರ್ವಿಕರ ಸಮಾಧಿಗಳಿಗೆ ಪೂಜೆ ಸಲ್ಲಿಸಲು ಆಗಮಿಸಲಾಗದೇ ಇಡಿ ಅಧಿಕಾರಿಗಳ ಎದುರು ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ. ಇತ್ತ ಸೋದರನಿಗೆ ಸಾಥ್ ನೀಡಿರುವ ಸಂಸದ ಡಿಕೆ ಸುರೇಶ್ ದೆಹಲಿಯಲ್ಲಿಯೇ ಉಳಿದುಕೊಂಡಿದ್ದಾರೆ.
ಪ್ರತಿ ವರ್ಷ ಗೌರಿ-ಗಣೇಶ ಹಬ್ಬದಂದು ಡಿಕೆ ಸಹೋದರರು ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ತಂದೆ ಡಿಕೆ ಕೆಂಪೇಗೌಡ ಹಾಗೂ ಅಜ್ಜಿ ಪಾರ್ವತಮ್ಮ ಸಮಾಧಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಅಲ್ಲದೇ ಗ್ರಾಮದಲ್ಲಿ ಜನರಿಗೆಲ್ಲ ಊಟ ಹಾಕಿ, ದಾನ ಮಾಡುವ ಮೂಲಕ ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಿದ್ದರು.
ಇಡಿ ಅಧಿಕಾರಿಗಳ ಎದುರು ವಿಚಾರಣೆಗೆ ಡಿಕೆಶಿ ಹಾಜರಾಗಿದ್ರಿಂದ ಹಬ್ಬಕ್ಕೆ ಬರಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಡಿಕೆ ಸಹೋದರರ ಅನುಪಸ್ಥಿತಿಯಲ್ಲಿ ಡಿಕೆಶಿಯವರ ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯ, ಪುತ್ರ ಆಕಾಶ್ ಸೇರಿ ಪೂರ್ವಿಕರ ಸಮಾಧಿಗೆ ನೋವಿನಲ್ಲೇ ಪೂಜೆ ಸಲ್ಲಿಸಿದರು. ಅತ್ತ ಹಬ್ಬದ ದಿನದಂದು ಪೂರ್ವಿಕರ ಪೂಜೆಗೂ ಸಹ ಮಾಜಿ ಸಚಿವ ಡಿಕೆ ಶಿವಕುಮಾರ್‍ಗೆ ಅವಕಾಶ ನೀಡದಕ್ಕೆ ಡಿಕೆಶಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರೆ, ಇತ್ತ ತಾಯಿ ಕೂಡಾ ತನ್ನ ಮಗನ ಸ್ಥಿತಿಯನ್ನ ನೋಡಿ ಗಳಗಳನೆ ಕಣ್ಣೀರಿಟ್ಟಿದ್ದರು.