ಬೆಂಗಳೂರು: ವಿಶ್ವಾಸಮತ ಯಾಚನೆ ಸಂಬಂಧಿಸಿದ ವಿಷಯದ ಮೇಲೆ ಸುದೀರ್ಘವಾಗಿ ಮಾತನಾಡಿ ಹೊರ ಬಂದ ಸಚಿವ ಡಿ.ಕೆ.ಶಿವಕುಮಾರ್, ಪಕ್ಷೇತರ ಶಾಸಕರು ನಮ್ಮ ವಿರುದ್ಧ ಹೇಗೆ ಕೈ ಎತ್ತುತ್ತಾರೆ ನೋಡೋಣ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ನಾಗೇಶ್ ಅವರನ್ನು ವಿಧಾನಸೌಧ ಒಂದು ಕಿ.ಮೀ. ಆಸುಪಾಸಿನಲ್ಲಿಯೇ ಇರಿಸಲಾಗಿದೆ. ನಾನು ಅವರಿಬ್ಬರು ಬರೋದನ್ನು ಕಾಯುತ್ತಿದ್ದೇನೆ. ವಿಧಾನಸೌಧದಲ್ಲಿ ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೆ ನೋಡೋಣ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷೇತರ ಶಾಸಕರಿಬ್ಬರಿಗೂ ಸಚಿವ ಸ್ಥಾನವನ್ನು ನೀಡಲಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಬೆನ್ನಲ್ಲೆ ತಮ್ಮ ನಿಲುವು ಬದಲಿಸಿಕೊಂಡು ಪಕ್ಷೇತರ ಶಾಸಕರು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ತಮ್ಮ ಬೆಂಬಲ ಹಿಂಪಡೆದು ದೋಸ್ತಿಗಳಿಗೆ ಶಾಕ್ ನೀಡಿದ್ದರು.