– ರಾಮನಗರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ, ಮುಂದೆ ಬೆಂಗಳೂರಿಗೆ ಸೇರುತ್ತಿದೆ ಎಂದ ಡಿಸಿಎಂ
ರಾಮನಗರ: ಸಾರ್ವಜನಿಕರು ಯಾರೂ ಕೂಡ ಒಂದು ರೂಪಾಯಿ ಲಂಚ ಕೊಡಬೇಡಿ. ನಿಮಗೆ ಮನೆ ಕೊಡುವ ಕೆಲಸ ನಾವು ಮಾಡ್ತೇವೆ ಎಂದು ರಾಮನಗರ ಜನತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಭರವಸೆ ನೀಡಿದರು.
ರಾಮನಗರದಲ್ಲಿ (Ramanagara) ನಡೆದ ಕಾಂಗ್ರೆಸ್ (Congress) ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಎರಡು ಬಾರಿ ಇಲ್ಲಿ ಶಾಸಕರಾಗಿ ಏನು ಸಾಕ್ಷಿ ಇದೆ. ಸರ್ಕಾರಿ ಶಾಲೆಗೆ 1 ಎಕರೆ ಜಾಗ ಕೊಟ್ಟಿದ್ದೀರಾ? ನೀವು ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂದು ಈಗ ನಾನು ಪ್ರಶ್ನೆ ಮಾಡಲ್ಲ. ಅದು ಜನರಿಗೆ ಗೊತ್ತಿದೆ. ಈ ಜಿಲ್ಲೆಗೆ ಸಾಕ್ಷಿ ಕೊಡುವ ಜವಾಬ್ದಾರಿ ಯೋಗೇಶ್ವರ್, ಬಾಲಕೃಷ್ಣ, ಇಕ್ಬಾಲ್ ಹುಸೇನ್ ಹಾಗೂ ನನ್ನ ಮೇಲೆ ಇದೆ. ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕು ಎಂದರು.
ಗ್ಯಾರಂಟಿ ಯೋಜನೆ, ಅಭಿವೃದ್ಧಿ ಮೇಲೆ ನಂಬಿಕೆ ಇಟ್ಟು ಜನ ಅಧಿಕಾರ ಕೊಟ್ಟಿದ್ದಾರೆ. 600 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಆಗುತ್ತಿದೆ. ಕಣ್ಣೀರು ಬೇಕೋ ಅಥವಾ ಅಭಿವೃದ್ಧಿ ಬೇಕೋ ಎಂದು ನಾವು ನಿಮ್ಮ ಮುಂದೆ ಬಂದಿದ್ದೆವು. ನಮಗೆ ಅಭಿವೃದ್ಧಿ ಬೇಕು, ಕಣ್ಣೀರು ಬೇಡ ಅಂತ ನೀವು ತೀರ್ಮಾನ ಮಾಡಿದ್ದೀರಿ. ಬಿಜೆಪಿ, ಜೆಡಿಎಸ್‌ನ ಬ್ಲಾಕ್ ಮೇಲ್ ರಾಜಕಾರಣಕ್ಕೆ ನೀವು ಜಗ್ಗಲಿಲ್ಲ. ನಿಮ್ಮ ತೀರ್ಪನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ನೀರು, ಹಾಲಿನ ಬೆಲೆ ಎರಡೂ ಒಂದೇ ಆಗಿದೆ. ಹಾಲಿನ ದರ ಏರಿಕೆ ಆಗಬೇಕು ಅಂತ ಮನವಿ ಮಾಡಿದ್ದೀರಿ. ಮುಂದಿನ ದಿನಗಳಲ್ಲಿ ಈ ಕಾರ್ಯವು ಆಗುತ್ತದೆ. ರಾಮನ ತಂದೆ ದಶರಥ. ರಾಮನ ಬಂಟ ಆಂಜನೇಯ. ದಶರಥನ ದೇವಾಲಯ ಎಲ್ಲೂ ಇಲ್ಲ. ಆದರೆ ಆಂಜನೇಯನ ದೇವಾಲಯ ಎಲ್ಲಾ ಕಡೆ ಇದೆ. ಯಾಕಂದ್ರೆ ಆಂಜನೇಯ ಪ್ರಾಮಾಣಿಕ ಸೇವಕ. ಜನರು ಸಹ ಸೇವೆ ಮಾಡುವವರನ್ನು ಗುರುತಿಸೋದು. ನಿಮ್ಮ ಸೇವೆಯನ್ನು ಮಾಡುವ ಕೆಲಸ ನಾವು ಮಾಡುತ್ತೇವೆ ಎಂದರು.
ಇದು ಋಣ ತೀರಿಸುವ ಕಾರ್ಯಕ್ರಮವಾಗಿದೆ. ನೀವು ಕೊಟ್ಟ ಶಕ್ತಿಗೆ ಅಭಿನಂದನೆ ತಿಳಿಸುತ್ತಿದ್ದೇವೆ. 2 ಬಾರಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಇವತ್ತಿನ ಈ ಕಾರ್ಯಕ್ರಮಕ್ಕೆ ಸಿಎಂ ಬರಬೇಕಿತ್ತು. ಬೆಳಿಗ್ಗೆ ಅವರ ಕಾಲಿಗೆ ನೋವಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಪಕ್ಷದ ಪರವಾಗಿ, ಜಿಲ್ಲೆಯ ಶಾಸಕನಾಗಿ ನಾನು ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಚುನಾವಣೆ ಸಮಯದಲ್ಲಿ ಸಾಕಷ್ಟು ಸಮೀಕ್ಷೆ ಬರುತ್ತಿದ್ದವು. ನಾನು ಮೊದಲೇ 138 ನಮ್ಮ ನಂಬರ್ ಅಂತ ಹೇಳಿದ್ದೆ. ಉಪಚುನಾವಣೆಗೂ ಮುಂಚೆಯೇ ಹೇಳಿದ್ದೆ. ಮೂರು ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಅಂದಿದ್ದೆ. ಎರಡೂ ಕಡೆ ಮಾಜಿ ಸಿಎಂ ಪುತ್ರರಿದ್ದರೂ ಸಹ ನಮ್ಮನ್ನ ಬೆಂಬಲಿಸಿದ್ದೀರಿ. ಮಾಧ್ಯಮಗಳ ಸಮೀಕ್ಷೆ ಉಲ್ಟಾ ಆಯ್ತು. ಇದು ನಿಮ್ಮ ಮೇಲೆ ನನಗಿದ್ದ ನಂಬಿಕೆ ಎಂದು ನುಡಿದರು.
ಕಾರ್ಯಕರ್ತರು ಯಾರು ಚಿಂತೆ ಮಾಡಬೇಕಾಗಿಲ್ಲ. ನಿಮ್ಮೆಲ್ಲರನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಮಹಿಳೆಯರು ನಮಗೆ ಹೆಚ್ಚು ಬೆಂಬಲ ಕೊಟ್ಟಿದ್ದಾರೆ. ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಇದನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕು, ಗೊಂದಲಕ್ಕೆ ಅವಕಾಶ ಕೊಡಬೇಡಿ. ನಾನು, ಸುರೇಶ್ ಎಲ್ಲರೂ ನಿಮ್ಮ ಜೊತೆ ಇರುತ್ತೇವೆ. ಕ್ಷೇತ್ರದ ಇತಿಹಾಸದಲ್ಲಿ ದೊಡ್ಡ ಬಹುಮತ ಕೊಟ್ಟಿದ್ದೀರಿ. ನಿಮ್ಮ ಖುಣವನ್ನ ತೀರಿಸುವ ಕೆಲಸ ಮಾಡುತ್ತೇವೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಸತ್ತೆಗಾಲಕ್ಕೆ ಭೇಟಿ ಕೊಟ್ಟು ನೀರಾವರಿ ಯೋಜನೆ ಚರ್ಚೆ ಮಾಡುತ್ತಿದ್ದೇವೆ. ಹಾಲಿನ ದರ ಹೆಚ್ಚಳದ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜನತಾದಳದ ಕಾರ್ಯಕರ್ತರು ಪಾಪ, ಟೈಂ ವೇಸ್ಟ್ ಮಾಡಿಕೊಳ್ಳಬೇಡಿ. ರಾಮನಗರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮುಂದೆ ಬೆಂಗಳೂರಿಗೆ ಸೇರುತ್ತಿದೆ. ಅಲ್ಲಿ ಒಬ್ಬ ವ್ಯಕ್ತಿಗಾಗಿ ಪಕ್ಷ ಬಲಿ ಕೊಡುವ ಕೆಲಸ ಆಗಿದೆ. ಇದರ ಬಗ್ಗೆ ಹೆಚ್ಚು ಮಾತನಾಡಲ್ಲ, ನೀವೆ ಯೋಚನೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಬಹಿರಂಗ ಆಹ್ವಾನ ನೀಡಿದರು.