ಬೆಂಗಳೂರು: ಬಿಜೆಪಿ ನಾಯಕರೆಲ್ಲಾ ನಮ್ಮ ಸ್ನೇಹಿತರು ಎಂದು ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪ್ರಧಾನಿ ಮೋದಿ ಭೇಟಿ ಮಾಡಲು ನಮಗೆ ಅನುಮತಿ ಲಭಿಸಿದ್ದು, ಸರ್ಕಾರ ಸಲ್ಲಿಸುವ ರಿಲೀಫ್ ಫಂಡ್ ಕುರಿತು ಚರ್ಚೆ ನಡೆಸಲು ಅನುಮತಿ ಪಡೆದಿರುವುದಾಗಿ ತಿಳಿಸಿದರು.
ಬಿಜೆಪಿ ನಾಯಕರು ನಿಮ್ಮ ವಿರುದ್ಧ ಐಟಿ ಇಲಾಖೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರೆಲ್ಲರೂ ನಮ್ಮ ಸ್ನೇಹಿತರು. ಆದರೆ ಸದ್ಯ ದೆಹಲಿಗೆ ಭೇಟಿ ನೀಡುವ ಕುರಿತು ಇನ್ನು ಯೋಚನೆ ಮಾಡುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ ಡಿಕೆ ಶಿವಕುಮಾರ್ ಅವರ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ತೆರಳಿ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ನಮ್ಮ ಸರ್ಕಾರದ ಜಲಸಂಪನ್ಮೂಲ ಸಚಿವರಾಗಿದ್ದು, ನಮ್ಮ ಕ್ಷೇತ್ರ ನೀರಾವರಿ ಕುರಿತು ಮಾತುಕತೆ ನಡೆಸಲು ಭೇಟಿ ನೀಡಿದ್ದೇನೆ. ನಾವು ಡಿಕೆ ಶಿವಕುಮಾರ್ ಅವರೊಂದಿಗೆ ಇದ್ದು, ಮುಂದಿನ ದಿನಗಳಲ್ಲಿಯೂ ಅವರೊಂದಿಗೆ ಇರುವುದಾಗಿ ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕೋಲಾರ ಸಂಸದ ಮುನಿಯಪ್ಪ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಸಂಸದ ಡಿಕೆ ಸುರೇಶ್ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ದ್ವೇಷದ ರಾಜಕಾರಣ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹರಡಿದೆ ಎಂದು ಆರೋಪಿದ್ದರು. ದೇಶದಲ್ಲಿ ಸದ್ಯ ಕರ್ನಾಟಕ ಬಿಜೆಪಿಯ ಟಾರ್ಗೆಟ್ ಆಗಿದ್ದು, ಸಿಎಂ ಹೆಚ್‍ಡಿಕೆ ಸರ್ಕಾರ ಉರುಳಿಸುವ ಷಡ್ಯಂತ್ರ್ಯವನ್ನು ಬಿಜೆಪಿ ರೂಪಿಸಿದೆ. ಇದಕ್ಕಾಗಿ ಇ.ಡಿ, ಐಟಿ ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿರುವವರನ್ನ ಬಂಧಿಸುವ ಪ್ರಯತ್ನ ನಡೆಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮಿಷನ್ 25 ಮಾಡಲು ಇಂತಹ ಒತ್ತಡ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ರು.
ಅಲ್ಲದೇ, ಆಪರೇಷನ್ ಕಮಲದ ಮೂಲಕ ನಮ್ಮನ್ನು ಸೆಳೆಯುವ ಪ್ರಯತ್ನ ನಡೆದಿದೆ. ಆದರೆ ಕಲ್ಲು ಬಂಡೆಯಂತೆ ಇದ್ದೇವೆ. ಮುಂದೆನಾಗುತ್ತದೆ ಗೊತ್ತಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದರು. ಇದನ್ನು ಓದಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್