Thursday, 21st November 2019

Recent News

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದ್ವೇಷದ ರಾಜಕಾರಣ, ಭಯದಿಂದ ತುರ್ತು ಸುದ್ದಿಗೋಷ್ಠಿ ಕರೆದಿಲ್ಲ: ಡಿಕೆ ಸುರೇಶ್

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಎಫ್‍ಐಆರ್ ದಾಖಲಿಸುವ ಪ್ರಯತ್ನ ನಡೆಸುತ್ತಿದ್ದ ಬೆನ್ನಲ್ಲೇ ಸಹೋದರ ಸಂಸದ ಡಿ.ಕೆ. ಸುರೇಶ್ ಅವರು ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನಾವು ಈಗಾಗಲೇ ಹಿರಿಯ ಅಧಿಕಾರಿಗಳನ್ನ ಮತ್ತು ವಕೀಲರನ್ನು ಭೇಟಿ ಮಾಡಿ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಬಳಿ ಇರುವ ಎಲ್ಲ ಲೆಕ್ಕಗಳಿಗೆ ಐಟಿಗೆ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು.

ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ. ಕಾನೂನು, ಸಂವಿಧಾನದ ಮೇಲೆ ಗೌರವವಿದೆ. ಭಯದಿಂದ ಈ ಸುದ್ದಿಗೋಷ್ಠಿ ಮಾಡುತ್ತಿಲ್ಲ. ಬಿಜೆಪಿ ಅವರ ದುರಾಡಳಿತ, ಅವರು ಯಾವ ರೀತಿ ವಿರೋಧ ಪಕ್ಷದ ಮೇಲೆ ಗದಾಪ್ರಹಾರ ಮತ್ತು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಈ ರಾಜ್ಯದ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದರು.

ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಹೀಗೆ ದೇಶದ ಎಲ್ಲ ನಾಯಕರ ಮೇಲೂ ಕೇಸು ಹಾಕಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಯತ್ನ ಮಾಡುತ್ತಿದ್ದಾರೆ. ಗುಜರಾತ್ ರಾಜ್ಯಸಭಾ ಚುನಾವಣೆ ನಂತರ ಈ ಸೇಡಿನ ರಾಜಕಾರಣ ಜಾಸ್ತಿಯಾಗಿದೆ. ಡಿ.ಕೆ ಶಿವಕುಮಾರ್ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಸರ್ಕಾರವನ್ನು ಅಸ್ಥಿರ ಮಾಡಲು, ಅಧಿಕಾರವನ್ನು ಪಡೆಯಲು ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಡಿ.ಕೆ ಶಿವಕುಮಾರ್ ಅವರನ್ನು ಅರೆಸ್ಟ್ ಮಾಡಿಸುತ್ತೇವೆ ಎಂದು ಬಿಜೆಪಿ ನಾಯಕರೇ ಹೇಳಿದ್ದಾರೆ ಎಂದು ಆರೋಪಿಸಿದರು.

ದ್ವೇಷದ ರಾಜಕಾರಣ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಳೆದಿದೆ. ಅದರಲ್ಲೂ ಕೂಡ ಕರ್ನಾಟಕ ಬಿಜೆಪಿಯ ಟಾರ್ಗೆಟ್ ಆಗಿದೆ. ಇಲ್ಲಿ ಬಿಜೆಪಿಗೆ ಸಡ್ಡು ಹೊಡೆದು ಸಮ್ಮಿಶ್ರ ಸರ್ಕಾರ ರಚನೆ ಆಗಿದೆ. ಈ ಸಂದರ್ಭದಲ್ಲಿ ಕೆಲವೊಂದು ವಿದ್ಯಮಾನಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐಟಿ, ಇಡಿ, ಸಿಬಿಐಯನ್ನ ಬಳಸಿಕೊಂಡು ರಾಜ್ಯ ಸರ್ಕಾರಕ್ಕೆ ಬೆಂಬಲವಾಗಿರುವವರನ್ನ ಬಂಧಿಸುವ ಪ್ರಯತ್ನವನ್ನು ಬಿಜೆಪಿಯ ರಾಜ್ಯ, ರಾಷ್ಟ್ರ ನಾಯಕರು ಮಾಡುತ್ತಿದ್ದಾರೆ ಎಂದರು.

ಕಳೆದು ಒಂದು ವರ್ಷದ ಹಿಂದೆ ನನ್ನ ಸಹೋದರರ ಮನೆ, ಕಚೇರಿ, ಸಂಬಂಧಿಕರ ಮೇಲೆ ಸುಮಾರು 68 ಕಡೆ ಐಟಿ ದಾಳಿ ನಡೆಸಿತ್ತು. ಅದು ಮುಂದುವರಿದು 80 ಕಡೆ ದಾಳಿ ನಡೆದಿತ್ತು. ಈಗಾಗಲೇ ಐಟಿ ಅಧಿಕಾರಿಗಳು ಪ್ರಾಷಿಕ್ಯೂಷನ್ ಕೇಸ್ ಅನ್ನು ಡಿ.ಕೆ ಶಿವಕುಮಾರ್ ಮೇಲೆ ಹಾಕಿದ್ದಾರೆ. ಆದರೆ ಕೇಸ್ ಹಾಕಿದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೊತ್ತಾದ ಮೇಲೆ ಮತ್ತೊಂದು ಪ್ರಯತ್ನವನ್ನು ಹಿಂಬಾಗಿಲಿನಿಂದ ಶಿವಕುಮಾರ್ ಮೇಲೆ ಒತ್ತಡ ತರಬೇಕು ಎಂದು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರಧಾನಿ ಮಂತ್ರಿ ಅವರಿಗೆ ಇದರ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಪ್ರಧಾನಿ ಮಂತ್ರಿಯ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಅದೀನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವ ಈ ವಿಚಾರ ಗೊತ್ತಿದೆಯೋ ಇಲ್ಲವೋ ತಿಳಿದಿಲ್ಲ. ಹಾಗಾಗಿ ಪ್ರಧಾನಿ ಮೋದಿ ಅವರು ಮಧ್ಯೆ ವಹಿಸಬೇಕು ಎಂದು ಒತ್ತಾಯಿಸುತ್ತೇನೆ. ಇದರ ಬಗ್ಗೆ ಮಾತನಾಡಲು ಅವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅಪರಾಧ ಎಸಗಿದರೆ ಮಾತ್ರ ಜಾರಿ ನಿರ್ದೇಶನಾಲಯಕ್ಕೆ ರೆಫರ್ ಮಾಡಲು ಅವಕಾಶ ಇರುತ್ತದೆ. ಆದರೆ ಇದು ಸಿಬಿಐ ಅಲ್ಲಾ ಸಿಬಿಐ ಮೋರ್ಚಾ, ಐಟಿ ಮೋರ್ಚಾ ಮತ್ತು ಇಡಿ ಮೋರ್ಚಾವಾಗಿ ಕೆಲಸ ಮಾಡುತ್ತಿದೆ. ಇದಕ್ಕೆಲ್ಲಾ ಕಾರಣ ಬಿಜೆಪಿ ನಾಯಕರ ಒತ್ತಡವಾಗಿದೆ. 1 ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಅಂತ ಎಲ್ಲ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅದರ ಅರ್ಥ ಏನು ಅಂತ ಎಲ್ಲರಿಗು ಗೊತ್ತಾಗಿದೆ. ಬಿಜೆಪಿಯವರು ಹೀಗೆ ಒತ್ತಡ ಹೇರುವ ಮೂಲಕ ಸರ್ಕಾರ ಬೀಳಿಸುವ ಯತ್ನ ನಡೆಸುತ್ತಿದ್ದಾರೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *