ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುವ ಮುನ್ನವೇ, ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಈಶ್ವರಪ್ಪನವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಅವರು ಕ್ಲೀನ್ ಚಿಟ್ ಕೊಟ್ಟ ನಂತರ ಯಾವ ಪೊಲೀಸ್ ಅಧಿಕಾರಿಗಳು ತಾನೇ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಾರೆ? ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆ. ಈಶ್ವರಪ್ಪನವರ ವಿರುದ್ಧ ದೂರು ದಾಖಲಾಗಿರುವ ಆಧಾರದ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದರು.
ಬುಧವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಸಂತೋಷ್ ಕೇಂದ್ರ ಸಚಿವ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪನವರಿಗೆ ಪತ್ರ ಬರೆದು ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಅವರು ದೆಹಲಿಯಲ್ಲಿ ಸುದ್ದಿವಾಹಿನಿಗಳಿಗೆ ಸಂದರ್ಶನವನ್ನು ಕೊಟ್ಟಿದ್ದರು. ಅದರಲ್ಲಿ ಅನೇಕ ವಿಚಾರಗಳು ಬಂದಿದ್ದವು. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಬದಲು, ಆತನ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ
Advertisement
Advertisement
ಈ 40% ಕಮಿಷನ್ ಕೇವಲ ಈ ಒಬ್ಬ ಗುತ್ತಿಗೆದಾರನ ಆರೋಪವಲ್ಲ. ರಾಜ್ಯದ 2 ಲಕ್ಷ ಗುತ್ತಿಗೆದಾರರು ಇರುವ ಸರ್ಕಾರಿ ನೋಂದಣಿಯಾಗಿರುವ ಸಂಘದ ಆರೋಪ. ಮೇವು ಪೂರೈಕೆ, ಬಿಬಿಎಂಪಿ ಕಸ, ಮಠಾಧೀಶರ ಅನುದಾನ ಎಲ್ಲಾ ವಿಚಾರದಲ್ಲೂ 40% ಕಮಿಷನ್ ಕೇಳಿ ಬರುತ್ತಿದೆ. ಇದು ರಾಜ್ಯದ ಪ್ರತಿ ಹಳ್ಳಿಗೂ ಹಬ್ಬಿದ್ದು, ಈ ಸರ್ಕಾರ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದೆ. ಹೀಗಾಗಿ ರಾಜಧಾನಿಯನ್ನು ರಕ್ಷಿಸಬೇಕಿದೆ ಎಂದರು.
Advertisement
ಹುಬ್ಬಳ್ಳಿ ಗಲಭೆ ವಿಚಾರವಾಗಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರದ ಸಚಿವರು ಹಾಗೂ ಸಂಸದರು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದವರು ಭಾಗಿಯಾಗಿದ್ದರೆ, ಅವರನ್ನು ಬಂಧಿಸಲಿ. ಈ ವರೆಗೂ ಯಾಕೆ ಬಂಧಿಸಿಲ್ಲ? ನಮ್ಮ ಜಿಲ್ಲಾಧ್ಯಕ್ಷರು ಆ ಸ್ಥಳದಲ್ಲಿದ್ದರು ಎಂದು ಹೇಳುತ್ತಾರೆ. ಪೊಲೀಸರೇ ಪರಿಸ್ಥಿತಿ ನಿಯಂತ್ರಿಸಲು, ಶಾಂತಿ ಕಾಪಾಡಲು ನಮ್ಮ ಜಿಲ್ಲಾಧ್ಯಕ್ಷರನ್ನು ಅಲ್ಲಿಗೆ ಆಹ್ವಾನಿಸಿದ್ದರು. ಪೊಲೀಸರ ಆಹ್ವಾನದ ಮೇರೆಗೆ ನಮ್ಮ ಜಿಲ್ಲಾಧ್ಯಕ್ಷರು ಪೊಲೀಸ್ ಜೀಪ್ ಹತ್ತಿ ಮೈಕ್‌ನಲ್ಲಿ ಎಲ್ಲರೂ ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ನಾಯಕರು ಕೇವಲ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿ ಪಲಾಯನ ಮಾಡುತ್ತಿರುವುದೇಕೆ? ಅವರ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
Advertisement
ಈ ನಗರವನ್ನು ನಾವು ಕಟ್ಟಿ ಬೆಳೆಸಿಲ್ಲ. ಜನರ ಶ್ರಮ, ಹಳೆಯ ನಾಯಕರ ದಕ್ಷತೆಯ ಆಡಳಿತದಿಂದ ಕಟ್ಟಲಾಗಿದೆ. ರಾಜ್ಯದ ಪ್ರತಿಭಾವಂತ ಯುವಕರು ಬೇರೆ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ನಮ್ಮ ರಾಜ್ಯದಲ್ಲಿ ಏನಾಗುತ್ತಿದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಬೊಮ್ಮಾಯಿ ಅವರು ನೈತಿಕ ಪೊಲೀಸ್ ಗಿರಿಗೆ ಯಾಕೆ ಬೆಂಬಲ ನೀಡುತ್ತಿದ್ದಾರೆ, ತನಿಖೆ ಆರಂಭಕ್ಕೂ ಮುನ್ನವೇ ಕ್ಲೀನ್ ಚಿಟ್ ಯಾಕೆ ನೀಡುತ್ತಿದ್ದಾರೆ? ತಿಳಿಯುತ್ತಿಲ್ಲ ಎಂದರು.
ನಮ್ಮ ಕಡೆ ಒಂದು ಮಾತಿದೆ. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ. ಏನೇ ಆದರೂ ಬಿಜೆಪಿಯವರು ಕಾಂಗ್ರೆಸ್ ಮೇಲೆ ಹಾಕುತ್ತಾರೆ. ಪೊಲೀಸರ ಮನವಿ ಮೇರೆಗೆ ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಸ್ಥಳಕ್ಕೆ ಹೋಗಿದ್ದರು. ಇಲ್ಲದಿದ್ದರೆ ಪೊಲೀಸ್ ಜೀಪ್ ಮೇಲೆ ನಿಂತು ಮೈಕ್ ಹಿಡಿದು ಮಾತನಾಡಲು ಸಾಧ್ಯವೇ? ಅವರಿಗೂ ಕಲ್ಲೇಟು ಬಿದ್ದಿದ್ದು, ಕೈಗೆ ಗಾಯವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ಪ್ರತಿ ಬಾರಿ ಇದನ್ನೇ ಹೇಳುತ್ತಾರೆ. ಕಾಂಗ್ರೆಸ್ ನವರು ಈ ಗಲಭೆ ಮಾಡಿದ್ದರೆ ಅವರನ್ನು ಬಂಧಿಸಲಿ. ನಿನ್ನೆ ನಾನೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮಾತನಾಡಿ, ವಾಸ್ತವಾಂಶವನ್ನು ತಿಳಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ಶಾಮೀಲಾಗಿ ದಂಧೆ ನಡೆಸಿದೆ: ದಿನೇಶ್ ಗುಂಡೂರಾವ್
ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್ ಗಿರಿ ಮಾಡುವವರ ರಕ್ಷಣೆಗೆ ನಾವು ಹೋಗುವುದಿಲ್ಲ. ಅದೇ ಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿಗಳು ಆರಂಭದಿಂದಲೂ ನೈತಿಕ ಪೊಲೀಸ್ ಗಿರಿ ಮೊಟಕು ಮಾಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಅಶೋಕ್, ಯಡಿಯೂರಪ್ಪನವರು ಮಾತನಾಡುತ್ತಾರೆ ಎಂದು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ರಾಜ್ಯದಲ್ಲಿ ಕಾನೂನು ಇದ್ದು, ಅದರಂತೆ ನಡೆದುಕೊಳ್ಳಲಿ. ಇವರು ಕಾನೂನು ಎಲ್ಲಿ ಸಮನಾಗಿ ಪಾಲನೆ ಮಾಡಿದ್ದಾರೆ? ನಮ್ಮ ಮೇಲೆ ಪ್ರಕರಣ ದಾಖಲಿಸಿ, ಈಶ್ವರಪ್ಪನವರ ಜತೆ ಮೆರವಣಿಗೆ ಹೋದವರ ಮೇಲೆ ಕೇಸ್ ದಾಖಲಿಸಿಲ್ಲ. ಶಿವಮೊಗ್ಗದಲ್ಲಿ ಸೆಕ್ಷನ್ 144 ಉಲ್ಲಂಘಿಸಿದಾಗ ಅವರ ಮೇಲೆ ಏಕೆ ಪ್ರಕರಣ ದಾಖಲಿಸಲಿಲ್ಲ? ನಮ್ಮ ಮೇಲೆ ಕೇಸ್ ಹಾಕಿ ಕೋರ್ಟ್ ಅಲೆಸಿ, ಜೈಲಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಆಯ್ತು ಅವರು ಏನು ಮಾಡುತ್ತಾರೋ ಮಾಡಲಿ, ನೋಡೋಣ ಎಂದು ಸವಾಲ್ ಹಾಕಿದರು.
ದಿಂಗಾಲೇಶ್ವರ ಸ್ವಾಮೀಜಿಗಳು ಮಾಡಿರುವ ಕಮಿಷನ್ ಆರೋಪದ ಹಿಂದೆ ಕಾಂಗ್ರೆಸ್ ಇದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಮಾತನಾಡಿದ ಡಿಕೆಶಿ, ಮೊದಲು ಬಿಜೆಪಿಯವರು ತಮ್ಮ ಮೇಲಿರುವ ಆರೋಪದಿಂದ ಹೊರಬರಲಿ. ಸ್ವಾಮೀಜಿ ಬಹಳ ವಿಚಾರವಂತರು, ಪ್ರಜ್ಞಾವಂತರಿದ್ದಾರೆ. ಅಂತಹವರು ಈ ಆರೋಪ ಮಾಡಿದ್ದಾರೆ. ಅವರಿಗಾಗಿರುವ ನೋವು, ಅನುಭವ ಹೇಳಿಕೊಂಡಿದ್ದಾರೆ. ನನ್ನ ಬಳಿಯೂ ಅನೇಕ ಸ್ವಾಮೀಜಿಗಳು ಈ ಬಗ್ಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರದ 40% ಕಮಿಷನ್ ವಿಚಾರ ಈಗ ಜಗಜ್ಜಾಹೀರವಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಾಗಲೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ, ಅವರ ಹಾಗೂ ರಾಜ್ಯದ ಮರ್ಯಾದೆ ಉಳಿಯುತ್ತಿತ್ತು. ಈಗ ಎಲ್ಲರ ಮರ್ಯಾದೆ ಬೀದಿಪಾಲಾಗಿದೆ ಎಂದರು.
ದಿಂಗಾಲೇಶ್ವರ ಸ್ವಾಮೀಜಿಗಳು ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದರು. ನಮ್ಮ ಮನೆಗೆ ಬಂದವರೆಲ್ಲಾ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡುತ್ತಾರೆ. ಈಶ್ವರಪ್ಪನವರಿಗೆ ಒಳ್ಳೆಯದಾಗಲಿ ಎಂದು ಧೈರ್ಯ ತುಂಬಲು ಸ್ವಾಮೀಜಿಗಳು ಅವರ ಮನೆಗೂ ಭೇಟಿ ನೀಡಿದ್ದರು. ಹಾಗೆಂದು ಅವರನ್ನು ಸಿಎಂ ಮಾಡಲು ಹೋಗಿದ್ದರು ಎಂದು ಹೇಳಲು ಸಾಧ್ಯವೇ? ಸುಮ್ಮನೆ ಎಲ್ಲರೂ ಹೊಸ ವಿಚಾರ ಸೃಷ್ಟಿಸುತ್ತಿದ್ದಾರೆ ಎಂದರು.
ಈ ವೇಳೆ ಬುಲ್ಡೋಜರ್ ವಿಚಾರವಾಗಿ ಮಾತನಾಡಿದ ಡಿಕೆಶಿ, ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ. ಅನೇಕ ವರ್ಷಗಳಿಂದ ವಸತಿ ಇಲ್ಲದ ನಿರಾಶ್ರಿತರು ಸರ್ಕಾರಿ ಜಾಗದಲ್ಲಿ ವಾಸುತ್ತಿದ್ದಾರೆ. ಆದರೆ ಅವರನ್ನು ತೆರವುಗೊಳಿಸಲು ಯಾವ ರೀತಿ ಪರ್ಯಾಯ ವ್ಯವಸ್ಥೆ ಮಾಡಬೇಕು, ಹೇಗೆ ಕ್ರಮ ಕೈಗೊಳ್ಳಬೇಕು ಎಂದು ಕಾನೂನಿದೆ. ಆದರೆ ರಾಜಕೀಯ ಉದ್ದೇಶಕ್ಕೆ, ದ್ವೇಷದಿಂದ ಅವರ ಮನೆಗಳನ್ನು ಬುಲ್ಡೋಜರ್‌ಗಳ ಮೂಲಕ ಕೆಡವಿ ಕೆಟ್ಟ ಸಂದೇಶ ರವಾನಿಸಲಾಗುತ್ತಿದೆ. ದೇಶದಲ್ಲಿ ಜನ ಭಯದಿಂದ ಬದುಕುವಂತೆ ಮಾಡಲಾಗುತ್ತಿದೆ. ದೇಶದಲ್ಲಿ ಹಬ್ಬಲಾಗುತ್ತಿರುವ ಕೋಮುದ್ವೇಷ ಖಂಡನೀಯ. ನಾವು ಎಲ್ಲರ ಭಾವನೆಗಳನ್ನು ಗೌರವಿಸಬೇಕು ಎಂದು ನಮ್ಮ ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ. ಈ ವಿಚಾರದಲ್ಲಿ ನ್ಯಾಯಾಲಯದ ಸೂಚನೆಗಳನ್ನು ಪಾಲಿಸಬೇಕು. ಬೀದಿ ವ್ಯಾಪಾರಿಗಳಿಗೂ ಅವಕಾಶ ನೀಡಬೇಕು ಎಂದು ತೀರ್ಪುಗಳಿವೆ. ಅದರಂತೆ ನಡೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು
2023ರ ಚುನಾವಣೆಯಲ್ಲಿ 50 ಸ್ವಾಮೀಜಿಗಳು ಸ್ಪರ್ಧೆ ಮಾಡುವ ವಿಚಾರವಾಗಿ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ವಿವಿಧ ಮಠಗಳ ಸ್ವಾಮೀಜಿಗಳ ಧ್ವನಿ ಹೊರಬರುತ್ತಿವೆ. ಈ ಹಿಂದೆ ಅವರನ್ನು ರಾಜಕೀಯಕ್ಕೆ ಬಳಸಿಕೊಂಡು ಈಗ ಅವರಿಗೆ ಬಿಜೆಪಿ ಸರ್ಕಾರ ನೋವುಂಟು ಮಾಡಿದೆ. ಅವರಿಗೆ ನೀಡುವ ಅನುದಾನದಲ್ಲಿ 30% ಕಮಿಷನ್ ಕೇಳಲಾಗುತ್ತಿದೆ. ಹೀಗಾಗಿ ಮಠಾಧೀಶರು ನೋವಿನಿಂದ ಈ ರೀತಿ ಧ್ವನಿ ಎತ್ತುತ್ತಿದ್ದಾರೆ. ಇವೆಲ್ಲಕ್ಕೂ ಬಿಜೆಪಿ ನಾಯಕರು ಉತ್ತರಿಸಬೇಕು ಎಂದರು.